ದೊಡ್ಡಬಳ್ಳಾಪುರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರತ್ತ ನ್ಯಾಯಾಲಯದಲ್ಲೇ ಶೂ ಎಸೆಯಲು ಯತ್ನಿಸಿದ ವಕೀಲ ಕಿಶೋರ್ ಎಂಬಾತನನ್ನು ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಸಂವಿಧಾನ ರಕ್ಷಣೆಗಾಗಿ ನಾಗರಿಕ ವೇದಿಕೆ ವತಿಯಿಂದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ವೇದಿಕೆ ಮುಖಂಡರಾದ ರುದ್ರರಾಧ್ಯ, ಆರ್.ಚಂದ್ರತೇಜಸ್ವಿ, ಕವಿತಾ, ಸಂಜೀವ್ ನಾಯ್ಕ್, ಮುನಿಪಾಪಯ್ಯ, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯಾಲಯಕ್ಕೆ ಉನ್ನತ ಸ್ಥಾನ, ಗೌರವ ಎಲ್ಲವೂ ಇದೆ. ಇಂತಹ ಉನ್ನತ ಸ್ಥಾನದಲ್ಲಿನ ವ್ಯಕ್ತಿಗಳನ್ನೇ ಅವಮಾನಿಸುವಂತ ಹಂತ ತಲುಪಿರುವ ಬಲಪಂಥೀಯ ಕೋಮುವಾದಿಗಳು ದೇಶಕ್ಕೆ ಕಂಟಕವಾಗಲಿದ್ದಾರೆ. ನ್ಯಾಯಾಧೀಶರತ್ತ ಶೂ ಎಸೆಯಲು ಮುಂದಾದ ವಕೀಲ ಕಿಶೋರ್ ಎಂಬುವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳದೆ ಹೋದರೆ ನ್ಯಾಯಾಲಯಗಳ ಗೌರವ ಕುಂದಲಿದೆ ಎಂದರು.
ಇಂತಹ ಘಟನೆ ಮರುಕಳಸದಂತೆ ಎಚ್ಚರ ವಹಿಸಬೇಕು. ನ್ಯಾಯಾಧೀಶರತ್ತ ಶೂ ಎಸೆಯಲು ಯತ್ನಿಸಿರುವ ಪ್ರಕರಣ ಅತ್ಯಂತ ಗಂಭೀರವಾದ ಸಂಗತಿಯಾಗಿದೆ. ಈ ಮತೀಯ ಕೋಮುವಾದ ಈಗಲೇ ಅಂತ್ಯವಾಗುವಂತೆ ನ್ಯಾಯಾಲಯ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.