ವಿಜಯಪುರ(ದೇವನಹಳ್ಳಿ): ರಾಜ್ಯದ ಹಲವೆಡೆ ಮಳೆ ಅಬ್ಬರಿಸುತ್ತಿದ್ದರೆ, ಜಿಲ್ಲೆಯ ವಿಜಯಪುರ ಹೋಬಳಿಯಲ್ಲಿ ವಾಡಿಕೆ ಮಳೆ ಬಾರದೆ ಬಿತ್ತನೆ ಕುಂಠಿತವಾಗಿದೆ.
ಮಳೆಗಾಲ ಆರಂಭವಾದ ದಿನದಿಂದಲೂ ರೈತರ ನಿರೀಕ್ಷೆಗೆ ತಕ್ಕಷ್ಟು ಮಳೆಯಾಗಿಲ್ಲ. ಜುಲೈ ಮುಗಿಯುತ್ತಾ ಬಂದರೂ ಇದುವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದೆ ಬಿತ್ತನೆ ಕಾರ್ಯ ಹಿನ್ನೆಡೆಯಾಗಿದೆ. ಮಳೆ ಯಾವಾಗ ಬರುತ್ತದೋ ಎಂದು ರೈತರು ಆಕಾಶದತ್ತ ಮುಖ ಮಾಡಿದ್ದಾರೆ.
ಸಾಮಾನ್ಯವಾಗಿ ಮುಂಗಾರು ಆರಂಭದಲ್ಲೆ ಭೂಮಿ ಉಳುಮೆ ಮಾಡಿ, ರಾಗಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುವ ರೈತರು, ಈ ಬಾರಿ ಮುಂಗಾರು ಆರಂಭ ತಿಂಗಳು ಕಳೆದರೂ ಭೂಮಿಯನ್ನು ಹದಗೊಳಿಸಿಲ್ಲ.
ದೇವನಹಳ್ಳಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 12,720 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೊರತೆಯಿಂದ 1,978 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.
ಭತ್ತ, ಸಜ್ಜೆ, ತೃಣಧಾನ್ಯಗಳು, ನವಣೆ, ಸಾಮೆ, ಹಾರಕ, ಬರಗು, ಊದುಲು, ಕೊರಲೆ, ಹುರುಳಿ, ಉದ್ದು, ಹೆಸರು, ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಪಾಪ್ ಕಾರ್ನ್, ಸ್ವೀಟ್ ಕಾರ್ನ್ , ಮೇವಿನ ಜೋಳ ಇದುವರೆಗೂ ಬಿತ್ತನೆಯಾಗಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ 13,222 ಹೇಕ್ಟರ್ ನೀರಾವರಿ ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯಲು ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆಯಿಂದಾಗಿ 2,048 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.
ಅಂಕಿ–ಅಂಶ
ಬಿತ್ತನೆ ಗುರಿ- 13,222 ಹೇಕ್ಟರ್
ಮಳೆಯಾಶ್ರಿತ ಪ್ರದೇಶ - 12,720
ಬಿತ್ತನೆ ಆಗಿವುದು - 1,978 ಹೆಕ್ಟೇರ್
ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ...
ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಮೋಡಗಳು ಮುಂದೆ ಮುಂದೆ ಸಾಗುತ್ತಿವೆ. ಇದರಿಂದ ರೈತರು ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ; ನಾಲ್ಕು ಹನಿಯ ಚೆಲ್ಲಿ...’ ಎಂದು ಮಳೆಗಾಗಿ ಆಕಾಶವನ್ನು ದಿಟ್ಟಿಸುತ್ತಿದ್ದಾರೆ. ನಿತ್ಯ ಮಳೆಗಾಗಿ ಕಾದು ಸುಸ್ತಾದ ರೈತರ ಮೊಗದಲ್ಲಿ ನಿರಾಸೆ ಮೂಡಿದೆ. ದಿನ ಬೆಳಗಾದರೆ ಕಾರ್ಮೋಡ ಕವಿಯುತ್ತದೆ. ಹೆಚ್ಚು ಮಳೆ ಬರುವ ಮುನ್ಸೂಚನೆ ಇದ್ದರೂ ನೋಡ ನೋಡುತ್ತಿದ್ದಂತೆ ಮೋಡ ಚದುರಿಹೋಗುತ್ತಿವೆ. ಆಗಾಗ ಬೀಳುವ ತುಂತುರು ಮಳೆ ಹೊರತುಪಡಿಸಿ ಭೂಮಿ ಹದಗೊಳಿಸುವಷ್ಟು ಮಳೆ ಬರುತ್ತಿಲ್ಲ. ಅಲ್ಪಸ್ವಲ್ಪ ತೇಂವಾಂಶವು ಗಾಳಿಯಿಂದ ಒಣಗಲಾರಂಭಿಸಿದೆ. ಇದರಿಂದ ಬಿತ್ತನೆ ಕಾರ್ಯಕ್ಕೆ ತೊಡಕು ಉಂಟಾಗಿದೆ ಎನ್ನುತ್ತಾರೆ ರೈತ ಸೂರ್ಯನಾರಾಯಣಪ್ಪ.
ಸರಿಯಾದ ಸಮಯದಲ್ಲಿ ಬಿತ್ತನೆ ಕಾರ್ಯ ಮುಗಿದರೆ ಉಳಿದ ಕೆಲಸಗಳು ಮಾಡಿಕೊಳ್ಳಲು ಅನುಕೂಲವಾಗುತ್ತಿತು. ಆದರೆ ಅವಧಿ ಮುಗಿದ ನಂತರ ಬಿತ್ತನೆ ಕಾರ್ಯ ಮಾಡಿದರೆ ಬೆಳೆ ಗುಣಮಟ್ಟ ಕಡಿಮೆಯಾಗಲಿದೆ. ಇಳುವರಿಯೂ ಕಡಿಮೆಯಾಗುತ್ತದೆ.ಶಿವಣ್ಣ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.