ದೊಡ್ಡಬಳ್ಳಾಪುರ: ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಆನ್‌ಲೈನ್ ಔಷಧಿ ಖರೀದಿಯಿಂದ ಗ್ರಾಹಕರಿಗೂ ತೊಂದರೆಯಾಗಲಿದೆ ಎಂದು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ನಿರ್ದೇಶಕ ಎನ್.ಸಿ.ಪಟೇಲಯ್ಯ ಹೇಳಿದರು.
ನಗರದ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಫಾರ್ಮಸಿ ದಿನಾಚರಣೆಯಲ್ಲಿಅವರು ಮಾತನಾಡಿದರು.
‘ಆನ್‌ಲೈನ್ ಔಷಧ ಮಾರಾಟಗಾರರು ಸರ್ಕಾರದ ಸಾಕಷ್ಟು ನಿಯಮಗಳಿಂದ ನುಣುಚಿಕೊಳ್ಳಲಿದ್ದಾರೆ. ಹೀಗಾಗಿ ಗ್ರಾಹಕರು ತಮಗೆ ಕಳಪೆ ಉತ್ಪನ್ನ ಅಥವಾ ಮತ್ಯಾವುದೇ ರೀತಿಯ ತೊಂದರೆಗಳಾದರೆ ಪರಿಹಾರ ಪಡೆಯಲು ಕಷ್ಟವಾಗಲಿದೆ’ ಎಂದರು.
‘ವೈದ್ಯರಿಂದ ಯಾವುದೇ ರೀತಿಯ ಚೀಟಿ ಇಲ್ಲದೆ ಗ್ರಾಹಕರಿಗೆ ಔಷಧಿ ನೀಡದೇ ಇರುವುದನ್ನು ಕಟ್ಟುನಿಟ್ಟಾಗಿ ಔಷಧಿ ಮಾರಾಟಗಾರರು ಪಾಲಿಸಬೇಕು. ನಮ್ಮ ಸುರಕ್ಷತೆ ದೃಷ್ಟಿಯಿಂದ ಔಷಧ ಮಾರಾಟ ಮಳಿಗೆಯಲ್ಲಿ ಸಿಸಿ ಟಿವಿ ಅಳವಡಿಸಬೇಕು. ಇದರಿಂದ ತಮ್ಮ ವ್ಯಾಪಾರಕ್ಕೆ ಸಾಕಷ್ಟು ರಕ್ಷಣೆ ದೊರೆಯಲಿದೆ’ ಎಂದರು.
ಜಿಲ್ಲಾ ಸಹಾಯಕ ಔಷಧಿ ನಿಯಂತ್ರಣ ಅಧಿಕಾರಿ ಜಿ.ವಿ.ನಾರಾಯಣರೆಡ್ಡಿ ಮಾತನಾಡಿ, ‘ಜನರ ಆರೋಗ್ಯ ರಕ್ಷಣೆಯಲ್ಲಿ ಔಷಧ ವ್ಯಾಪಾರಿಗಳ ಪಾತ್ರವು ಮುಖ್ಯವಾಗಿದೆ. ಇಡೀ ದೇಶದಲ್ಲಿ ಇಂದು 10 ಲಕ್ಷ ಫಾರ್ಮಸಿಸ್ಟ್ ಇದ್ದಾರೆ. ಗ್ರಾಹಕರಿಗೆ ಔಷಧ ನೀಡಿದರಷ್ಟೇ ಸಾಲದು. ಅವುಗಳನ್ನು ಯಾವಾಗ ಬಳಸಬೇಕು ಎನ್ನುವ ಮಾಹಿತಿಯನ್ನು ನೀಡಿದರೆ ಒಳಿತು. ಒಂದೇ ಚೀಟಿಯನ್ನು ಎರಡನೇ ಬಾರಿಗೆ ತಂದು ಔಷಧಿ ನೀಡುವಂತೆ ಗ್ರಾಹಕರು ಕೇಳಿದರೆ ವೈದ್ಯರ ಸಲಹೆ ಪಡೆಯುವಂತೆ ತಿಳಿಸಬೇಕು. ಗರ್ಭಿಣಿಯರಿಗೆ ಔಷಧಗಳನ್ನು ನೀಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ‘ಎಲ್ಲರಿಗೂ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧ ಪೂರೈಸಿ’ ಎನ್ನುವುದು ಈ ವರ್ಷದ ವಿಶ್ವ ಫಾರ್ಮಸಿ ದಿನಾಚರಣೆಯ ಘೋಷಣೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಔಷಧ ಮಾರಾಟಗಾರ ಹಾಗೂ ಸಂಘದ ಉಪಾಧ್ಯಕ್ಷ ಕೆ.ಎಲ್.ಉಮೇಶ್ ಅವರನ್ನು ಅಭಿನಂದಿಸಲಾಯಿತು. ಸ್ನೇಹ ಭಾರತಿ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಸಮವಸ್ತ್ರ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಡಿ.ಎಸ್.ಸಿದ್ದಣ್ಣ ವಹಿಸಿದ್ದರು. ಕಾರ್ಯದರ್ಶಿ ಜಿ.ಎಸ್.ಶಿವಕುಮಾರ್, ಖಜಾಂಚಿ ಟಿ.ಡಿ.ಶ್ಯಾಮಸುಂದರ್,ನಿರ್ದೇಶಕರಾದ ರಜನೀಶ್, ರಹಿಂಪಾಷ, ಜಗನ್ನಾಥ್, ಕೆಂಪಣ್ಣ, ನಾಗೇಂದ್ರಪ್ಪ, ಹೇಮಂತ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.