
ದೇವನಹಳ್ಳಿ: ಶಿವಯೋಗಿ ಸಿದ್ಧರಾಮೇಶ್ವರರು ಶ್ರದ್ಧೆ, ನಿಷ್ಠೆ ಮತ್ತು ಕಾಯಕದ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂಬ ಸಂದೇಶ ನೀಡಿದ್ದಾರೆ. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಭಕ್ತಿ ಚಳುವಳಿಯ ಮೂಲಕ ಸಮಾಜದಲ್ಲಿ ಕಾಯಕ, ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಲಾಯಿತು. ಜಾತಿ–ಧರ್ಮದ ಆಧಾರದ ಮೇಲೆ ಮಾನವನನ್ನು ಅಳೆಯದೆ, ಸಮಾನತೆಯಿಂದ ಬದುಕಬೇಕು ಎಂಬುದೇ ಸಿದ್ಧರಾಮೇಶ್ವರರ ಆಶಯವಾಗಿತ್ತು ಎಂದು ಹೇಳಿದರು.
ಸಮುದಾಯದ ಸಂಘಕ್ಕೆ ಜಾಗ ಮಂಜೂರು ಮಾಡಬೇಕು ಹಾಗೂ ದೇವನಹಳ್ಳಿ ಪಟ್ಟಣದಲ್ಲಿ ಒಂದು ವೃತ್ತಕ್ಕೆ ಶಿವಯೋಗಿ ಸಿದ್ಧರಾಮೇಶ್ವರರ ಹೆಸರಿಡುವಂತೆ ಜಿಲ್ಲಾಧಿಕಾರಿಗೆ ಬಯಪ ಅಧ್ಯಕ್ಷ ವಿ.ಶಾಂತಕುಮಾರ್ ಮನವಿ ಸಲ್ಲಿಸಿದರು.
ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ಶರಣಯ್ಯ ಹಿರೇಮಠ್, ಸಿದ್ಧರಾಮೇಶ್ವರರು ವಚನಗಳ ಮೂಲಕ ಕರ್ಮಯೋಗ, ಸ್ವಾವಲಂಬನೆ ಮತ್ತು ಸಾಮಾಜಿಕ ಸಮಾನತೆಯ ಸಂದೇಶ ಸಾರಿದರು ಎಂದರು. ಕೆರೆ–ಕಟ್ಟೆ, ಬಾವಿ ನಿರ್ಮಾಣದ ಮೂಲಕ ಅನೇಕ ಗ್ರಾಮಗಳ ಅಭಿವೃದ್ಧಿಗೆ ಅವರು ಕಾರಣರಾಗಿದ್ದರು. ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಅಂಕಿತದ ವಚನಗಳಲ್ಲಿ ಕಾಯಕ ಮತ್ತು ಬಸವಣ್ಣನ ತತ್ವಗಳ ಅನುಸರಣೆ ಸ್ಪಷ್ಟವಾಗಿ ಕಾಣುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ, ಸಮಾಜದ ಮುಖಂಡರು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.