ADVERTISEMENT

ಗ್ರಾ. ಪಂ ಕಚೇರಿಗೆ ಮುತ್ತಿಗೆ

ಬಿದಲೂರು: ರಸ್ತೆ ಕಾಮಗಾರಿ ಕಳಪೆ ಆರೋಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:51 IST
Last Updated 7 ಫೆಬ್ರುವರಿ 2023, 4:51 IST
ರಸ್ತೆ ದುರಸ್ತಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಸ್ಥಳೀಯರು ಬಿದಲೂರು ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು
ರಸ್ತೆ ದುರಸ್ತಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಸ್ಥಳೀಯರು ಬಿದಲೂರು ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು   

ದೇವನಹಳ್ಳಿ: ತಾಲ್ಲೂಕಿನ ಬಿದಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಗಳತೆ ದೂರದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕಳಪೆ ಗುಣಮಟ್ಟದಿಂದ ಕೂಡಿದ್ದು, ಅಭಿವೃದ್ಧಿ ಹೆಸರಿನಲ್ಲಿ ಜನಪ್ರತಿನಿಧಿಗಳು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಬಿದಲೂರು ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿ ಪ್ರಾರಂಭಕ್ಕೂ ಮುನ್ನ ಬಿದಲೂರು ಗ್ರಾಮಪಂಚಾಯಿತಿಯಿಂದ ನಿರಾಪೇಕ್ಷಣಾ ಪತ್ರವನ್ನು ಪಡೆದಿಲ್ಲ, ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ಇಲ್ಲ, ರಸ್ತೆ ದುರಸ್ತಿ ಕಾರ್ಯಾದೇಶದಲ್ಲಿ ಇರುವ ಯಾವ ಅಂಶವೂ ಪಾಲನೆಯಾಗುತ್ತಿಲ್ಲ. ಇಷ್ಟೆಲ್ಲ ಲೋಪಗಳು ಕಂಡು ಬಂದಿದ್ದರೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಮೌನ ವಹಿಸಿದ್ದಾರೆ ಎಂದು ಎಂದು ಪಿಡಿಓ ಸಿದ್ದರಾಜು ಅವರಿಗೆ ಪ್ರತಿಭಟನನಿರತರು ತರಾಟೆ ತೆಗೆದುಕೊಂಡರು.

ಬಿದಲೂರು ಸರ್ಕಲ್‌ ನಿಂದ ಓಣಿ ಆಂಜನೇಯ ದೇಗುಲದವರೆಗೂ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ವಾಸ್ತವವಾಗಿ ಎಸ್‌.ಟಿ ಕಾಲೊನಿ ರಸ್ತೆ ಅಭಿವೃದ್ಧಿ ಎಂದು ನಮೂದಾಗಿದೆ. ಅದಕ್ಕೆ ಸುಳ್ಳು ದಾಖಲೆ ನೀಡುತ್ತಿದ್ದಾರೆ. ಕಾಮಗಾರಿ ಸಂಬಂಧ ನಾಮಫಲಕ ಹಾಕಿ ಎಂದು ತಾಕೀತು ಮಾಡಿದರೇ ಕಾಮಗಾರಿ ಮೊಟಕುಗೊಳಿಸಿ ತೆರಳುತ್ತಿದ್ದಾರೆ’ ಎಂದು ಗ್ರಾಮಸ್ಥ ಮುನಿರಾಜು ಆರೋಪಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಸ್ಥಳೀಯ ಚುನಾಯಿತ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲೀ, ಸದಸ್ಯರಾಗಲೀಸ್ಥಳಕ್ಕೆ ಆಗಮಿಸಿರುವುದಿಲ್ಲವೆಂದು ಸ್ಥಳೀಯ ಯುವಕರು ಮತ್ತಷ್ಟು ಆಕ್ರೋಶ ಹೊರಹಾಕಿದರು.

ಈ ಕುರಿತು ಪತ್ರಿಕ್ರಿಯಿಸಿದ ಬಿದಲೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದರಾಜು, ‘ಈಗಾಗಲೇ ಕಾಮಗಾರಿ ಸಂಬಂಧಿಸಿದ ಎಂಜಿನಿಯರಿಗೆ ಮಾಹಿತಿ ನೀಡಿದ್ದೇವೆ. ಕಾಮಗಾರಿ ಕುರಿತು ಪಂಚಾಯತಿಯಿಂದ ನಿರಾಪೇಕ್ಷಣಾ ಪತ್ರ ಪಡೆದಿಲ್ಲ. ಗುತ್ತಿಗೆದಾರರು ಕೆಲಸ ಪ್ರಾರಂಭಿಸಿಲ್ಲ ಎನ್ನುತ್ತಿದ್ದಾರೆ. ಆದರೆ ಸ್ಥಳೀಯರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಕಾರ್ಯಾದೇಶವನ್ನು ತೆಗೆದುಕೊಂಡು ಖುದ್ದು ಎಂಜಿನಿಯರ್‌ ಸ್ಥಳಕ್ಕೆ ಭೇಟಿ ನೀಡುತ್ತೇವೆ ಎಂದಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.