ADVERTISEMENT

ಬೆಲೆ ಏರಿಕೆಯಲ್ಲೂ ಭರ್ಜರಿ ಖರೀದಿ !

ಬರಗಾಲದ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:20 IST
Last Updated 8 ಆಗಸ್ಟ್ 2019, 13:20 IST
ವಿಜಯಪುರದ ಹಳೆ ಪುರಸಭಾ ಕಾರ್ಯಾಲಯದ ಮುಂಭಾಗದ ರಸ್ತೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಾರಾಟಕ್ಕೆ ಜೋಡಿಸಿರುವ ಸಿಹಿ ತಿಂಡಿಗಳ ಅಂಗಡಿಯಲ್ಲಿ ಖರೀದಿ ಮಾಡುತ್ತಿರುವ ಗ್ರಾಹಕರು
ವಿಜಯಪುರದ ಹಳೆ ಪುರಸಭಾ ಕಾರ್ಯಾಲಯದ ಮುಂಭಾಗದ ರಸ್ತೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಾರಾಟಕ್ಕೆ ಜೋಡಿಸಿರುವ ಸಿಹಿ ತಿಂಡಿಗಳ ಅಂಗಡಿಯಲ್ಲಿ ಖರೀದಿ ಮಾಡುತ್ತಿರುವ ಗ್ರಾಹಕರು   

ವಿಜಯಪುರ: ತೀವ್ರ ಬರಗಾಲದ ನಡುವೆಯೂ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿರುವ ಜನರು, ಈ ವರ್ಷವಾದರೂ ಉತ್ತಮ ಮಳೆ, ಬೆಳೆಗಳಾಗಿ ಸಮೃದ್ಧ ಲಕ್ಷ್ಮಿ ಮನೆಗೆ ಬರಲಿ ಎಂದು ಹಣ್ಣು ಹೂ ಕಾಯಿಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ವ್ರತ ಆಚರಿಸಲು ಮಹಿಳೆಯರು ಮನೆಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಮಹಿಳೆಯರು ಕಾತುರರಾಗಿದ್ದಾರೆ. ನಗರದ ರಸ್ತೆ ಬದಿಗಳಲ್ಲಿ ಇಟ್ಟುಕೊಂಡಿರುವ ಹಣ್ಣು, ಹೂವಿನ ಅಂಗಡಿಗಳಲ್ಲಿ ಖರೀದಿ ಜೋರಾಗಿದೆ. ಈ ಪೂಜೆ ಮಾಡಿದವರ ಧನ - ಧಾನ್ಯ - ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಹೆಚ್ಚು ಉತ್ಸಾಹದಿಂದ ಪೂಜೆಗಳನ್ನು ನೆರವೇರಿಸುತ್ತಾರೆ.

ಗೃಹಿಣಿ ಅರುಣತಿ ರುಮಲೇಶ್ ಈ ಆಚರಣೆಯ ಕುರಿತು ಮಾತನಾಡಿ, ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ನಡೆಯುವ ಈ ಹಬ್ಬದಂದು ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ ಸೇರಿ ಮನೆಗಳಲ್ಲಿಯೂ ವ್ರತ ಮಾಡಲಿಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದರು.

ADVERTISEMENT

ಮನೆಯಲ್ಲಿ ವರಮಹಾಲಕ್ಷ್ಮಿ ಮೂರ್ತಿಯನ್ನಿಟ್ಟು ಸೀರೆ, ತಾಳಿ, ಬಂಗಾರದ ಆಭರಣಗಳನ್ನು ತೊಡಿಸಿ ಹೂಗಳಿಂದ ಅಲಂಕರಿಸುತ್ತಾರೆ. ನೈವೇದ್ಯ ಮಾಡಿ ಸಂಜೆ ಮುತ್ತೈದೆಯರನ್ನು ಆಮಂತ್ರಿಸಿ ಅರಿಶಿಣ, ಕುಂಕುಮ, ಹೂವು, ಹಣ್ಣು ಕೊಡುವುದರ ಮೂಲಕ ಅವರಲ್ಲಿ ಲಕ್ಷ್ಮಿ ರೂಪವನ್ನು ಕಾಣಲಾಗುತ್ತದೆ ಎಂದು ಹೇಳಿದರು.

ಗೃಹಿಣಿ ಭಾಗ್ಯಮ್ಮ ಮಾತನಾಡಿ, ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ವಿಷ್ಣುವಿನ ಪತ್ನಿ ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿ ಹಣ, ಆಹಾರ, ಆರೋಗ್ಯ, ಸಂಪತ್ತು, ಸಂತಾನ, ಸುಮಂಗಲಿಯಾಗಿ ಬಾಳುವಂತೆ ಹರಸು ಎಂದು ಲಕ್ಷ್ಮಿಯಲ್ಲಿ ಹೆಣ್ಣು ಮಕ್ಕಳು ಬೇಡಿಕೊಳ್ಳುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಹಾಪ್‌ಕಾಮ್ಸ್ ಮಳಿಗೆಗೆ ಬಾಳೆ, ಸೀಬೆ, ಅನಾನಸ್, ಸೇಬು, ಮರಸೇಬು, ಮೂಸಂಬಿ, ಸಪೋಟ ಇತ್ಯಾದಿ ಹಣ್ಣುಗಳನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಗತ್ಯ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ ಎಂದು ಸಿಬ್ಬಂದಿ ಹೇಳಿದರು.

ಸ್ಥಳೀಯ ಗ್ರಾಹಕಿ ಮೀನಾಕ್ಷಿ ಅವರ ಪ್ರಕಾರ, ‘ಹಬ್ಬದ ಹಿಂದಿನ ದಿನದಂದು ಖರೀದಿಗೆ ಹೋದರೆ ಬೆಲೆಗಳು ಜಾಸ್ತಿ. ವಿಪರೀತ ಜನಸಂದಣಿ ಇರುತ್ತದೆ. ಆದ್ದರಿಂದ ಒಂದು ದಿನ ಮುಂಚಿತವಾಗಿಯೇ ಖರೀದಿಗೆ ಬಂದಿದ್ದೇವೆ. ಆದರೆ ಬೆಲೆಗಳು ಕಡಿಮೆಯೇನಿಲ್ಲ. ತುಂಬಾ ದುಬಾರಿ. ಕನಕಾಂಬರ 100 ಗ್ರಾಂ ಹೂವಿಗೆ ₹ 225 ಕೊಟ್ಟೆವು. ತಾವರೆ ಹೂವು ಸಣ್ಣ ಮೊಗ್ಗಿಗೂ ₹ 30 ಕೇಳುತ್ತಿದ್ದಾರೆ. ಈ ದುಬಾರಿ ಬೆಲೆಗಳಲ್ಲಿ ಹಬ್ಬಗಳು ಯಾಕಾದ್ರೂ ಬರ್ತವೋ’ ಎಂದು ಅನಿಸುತ್ತೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.