ADVERTISEMENT

ಭಾಷಾ ಹೋರಾಟದ ಜತೆಗೆ ಸಾಮಾಜಿಕ ಬದ್ಧತೆ ಮುಖ್ಯ: ಎಚ್.ಎನ್.ದೀಪಕ್

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 2:27 IST
Last Updated 7 ಅಕ್ಟೋಬರ್ 2020, 2:27 IST
ಕರುನಾಡ ವಿಜಯ ಸೇನೆ ಜಿಲ್ಲಾ ಪೂರ್ವಭಾವಿ ಸಭೆಯನ್ನು ರಾಜ್ಯ ಅಧ್ಯಕ್ಷ ದೀಪಕ್ ಉದ್ಘಾಟಿಸಿದರು
ಕರುನಾಡ ವಿಜಯ ಸೇನೆ ಜಿಲ್ಲಾ ಪೂರ್ವಭಾವಿ ಸಭೆಯನ್ನು ರಾಜ್ಯ ಅಧ್ಯಕ್ಷ ದೀಪಕ್ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ಕನ್ನಡಪರ ಸಂಘಟನೆಗಳು ಸಾಮಾಜಿಕ ಕಳಕಳಿಯನ್ನೂ ಬೆಳೆಸಿಕೊಳ್ಳುವ ಮೂಲಕ ಜನಸ್ನೇಹಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು’ ಎಂದು ಕರುನಾಡ ವಿಜಯ ಸೇನೆ ರಾಜ್ಯ ಅಧ್ಯಕ್ಷ ಎಚ್.ಎನ್.ದೀಪಕ್ ಹೇಳಿದರು.

ನಗರದ ಡಾ.ರಾಜ್‍ಕುಮಾರ್ ಕಲಾ ಮಂದಿರದಲ್ಲಿ ನಡೆದ ಕರುನಾಡ ವಿಜಯ ಸೇನೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಸಭೆಯಲ್ಲಿ ಅವರು ಮಾತನಾಡಿದರು.

‘ಕನ್ನಡ ಸಂಘಟನೆಗಳು ನಾಡಿನ ಇತಿಹಾಸ, ನೆಲ-ಜಲ, ಭಾಷಾ ಹೋರಾಟಗಳ ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಹೋರಾಟಗಳನ್ನು ರೂಪಿಸಬೇಕು. ಡಾ.ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ಯಥಾವತ್ತಾಗಿ ಜಾರಿಗೆ ತರಬೇಕು. ಕನ್ನಡಿಗರ ಉದ್ಯೋಗ ಕಸಿದುಕೊಳ್ಳುವ ಯತ್ನ ಸರಿಯಲ್ಲ. ಈ ಬಗ್ಗೆ ನಿರಂತರ ಹೋರಾಟಗಳು ನಡೆಯುತ್ತಿದ್ದರೂ ಆಳುವ ಸರ್ಕಾರಗಳು ಗಮನ ಹರಿಸದೆ ಇರುವುದು ವಿಷಾದನೀಯ’ ಎಂದರು.

ADVERTISEMENT

‘ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದಾದ್ಯಂತ ಸಂಘ-ಸಂಸ್ಥೆಗಳು ಕೈಗೊಂಡಿರುವ ಜನಪರ ಕಾರ್ಯಕ್ರಮಗಳು, ತೋರಿರುವ ಜನಪರ ಕಾಳಜಿ ಇತರರಿಗೆ ಮಾದರಿ ಎಂದ ಅವರು, ಸಂಘಟನೆಗಳಿಗೆ ಬರುವ ಯುವಕರು ನಾಡಿನ ಸಮಗ್ರ ಚಿಂತನೆ ಬೆಳೆಸಿಕೊಳ್ಳಬೇಕು. ಸಂಘಟನೆಯಲ್ಲಿ ಕನ್ನಡವೇ ಧರ್ಮ, ಜಾತಿ ಹಾಗೂ ಎಲ್ಲವೂ ಎಂಬುದನ್ನು ಮರೆಯಬಾರದು’ ಎಂದರು.

‘ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಧಕ್ಕೆ ತರುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ತಾಯಿನುಡಿಯ ರಕ್ಷಣೆ ಎಲ್ಲ ಕನ್ನಡಿಗರ ಆದ್ಯ ಕರ್ತವ್ಯವಾಗಬೇಕು. ಹೋರಾಟಕ್ಕೆ ಹೆಸರಾಗಿರುವ ದೊಡ್ಡಬಳ್ಳಾಪುರದಲ್ಲಿ ಕರುನಾಡ ವಿಜಯ ಸೇನೆ ಆರಂಭವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಪ್ರಾಮಾಣಿಕ ಹಾಗೂ ಪ್ರಭಾವಶಾಲಿ ಸಂಘಟನೆಗೆ ಒತ್ತು ನೀಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ಕರುನಾಡ ವಿಜಯ ಸೇನೆ ರಾಜ್ಯ ವಕ್ತಾರ ರಾಮ್‍ಪ್ರಸಾದ್, ವಿಜಯ್, ರಾಜ್ಯ ಯುವ ಘಟಕ ಅಧ್ಯಕ್ಷ ಆರ್.ಎಸ್.ಮಹೇಶ್, ತಾಲ್ಲೂಕು ಮುಖಂಡರಾದ ಎಲೆ ಮಂಜುನಾಥ್, ಎನ್.ನಂಜಪ್ಪ, ಭಾನುಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.