ವಿಜಯಪುರ (ದೇವನಹಳ್ಳಿ): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ನಡೆಸಲು ನಿಗದಿಪಡಿಸಿದ್ದ ಕಾಲವಧಿಯನ್ನು ಸರ್ಕಾರ ಅ.18 ರವರೆಗೆ ವಿಸ್ತರಿಸಿದ್ದು, ಸಮೀಕ್ಷೆದಾರರು ಬಾಕಿಯಿರುವ ಕುಟುಂಬಗಳ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ತಿಳಿಸಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷೆದಾರರ ಸಭೆಯಲ್ಲಿ ಮಾತನಾಡಿದರು.
ಸಮೀಕ್ಷೆಯಲ್ಲಿ ಯಾವುದೇ ಗೊಂದಲಗಳಿದ್ದರೆ ಮೇಲ್ವಿಚಾರಕರಿಂದ ಮಾಹಿತಿ ಪಡೆದು ಪರಿಹರಿಸಿಕೊಳ್ಳಬೇಕು. ಗಣತಿ ಕಾರ್ಯಕ್ಕಾಗಿ ನೇಮಿಸಿರುವ ಸಿಬ್ಬಂದಿ, ನಿಖರವಾದ ಮಾಹಿತಿಗಳನ್ನು ಕಲೆ ಹಾಕುವ ಮೂಲಕ ಸರ್ಕಾರಕ್ಕೆ ನೈಜವಾದ ಅಂಕಿ-ಅಂಶಗಳನ್ನು ರವಾನೆ ಮಾಡಬೇಕೆಂದು ಗಣತಿದಾರರಿಗೆ ತಿಳಿಸಿದರು.
ಗೊಂದಲದಲ್ಲೇ ಸಮೀಕ್ಷೆ
ಸಮೀಕ್ಷೆಗೆ ಆಯಾ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿದ್ದರೆ ಇಷ್ಟೊತ್ತಿಗಾಗಲೇ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳುತ್ತಿತ್ತು. ಕೆಲವರಿಗೆ ಲೋಕೇಷನ್ ಸಿಗುತ್ತಿಲ್ಲ. ಕೆಲವರಿಗೆ ಮನೆಗಳು ಗೊತ್ತಿಲ್ಲ. ಕೆಲವರು ಮಾಹಿತಿ ಬಹಿರಂಗ ಪಡಿಸುವುದಿಲ್ಲ. ಇಂತಹ ಗೊಂದಲ ವಾತಾವರಣ ನಿರ್ಮಾಣ ಮಾಡಿರುವುದರಿಂದ ನಡೆಸಿದ ಸಮೀಕ್ಷೆಯನ್ನೆ ಪುನಃ ನಡೆಸಬೇಕಾಗಿದೆ ಎಂದು ಹೆಸರೇಳಲಿಚ್ಚಿಸದ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.