ADVERTISEMENT

ಸಮಾಜಸೇವೆ ಚುನಾವಣೆಗೆ ಮೀಸಲಾಗಬಾರದು

ಸಂಘ ಸಂಸ್ಥೆಗಳು ಜನಪರ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಬೇಕು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 13:45 IST
Last Updated 1 ಫೆಬ್ರುವರಿ 2019, 13:45 IST
ಚಂದಾಪುರದ ಸೂರ್ಯಸಿಟಿಯಲ್ಲಿ ಬಿ.ಶಿವಣ್ಣ ಹಿತೈಷಿ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ ವೃದ್ಧರಿಗೆ ಕಂಬಳಿಗಳನ್ನು ವಿತರಿಸಿದರು
ಚಂದಾಪುರದ ಸೂರ್ಯಸಿಟಿಯಲ್ಲಿ ಬಿ.ಶಿವಣ್ಣ ಹಿತೈಷಿ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ ವೃದ್ಧರಿಗೆ ಕಂಬಳಿಗಳನ್ನು ವಿತರಿಸಿದರು   

ಆನೇಕಲ್: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ವ್ಯಾಪಾರೀಕರಣಗೊಳ್ಳುತ್ತಿರುವ ಈ ದಿನಗಳಲ್ಲಿಸಂಘ ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಆಯೋಜಿಸುವ ಮೂಲಕ ಅರ್ಹರಿಗೆ ಸೇವೆ ದೊರೆಯುವಂತಾಗಬೇಕು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ತಾಲ್ಲೂಕಿನ ಚಂದಾಪುರದ ಸೂರ್ಯಸಿಟಿಯಲ್ಲಿ ಬಿ.ಶಿವಣ್ಣ ಹಿತೈಷಿ ಬಳಗದ ವತಿಯಿಂದ ಆಯೋಜಿಸಿದ್ದ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಹೆಚ್ಚಿನ ವೆಚ್ಚ ಭರಿಸುವುದು ಸಾಮಾನ್ಯ ಕುಟುಂಬ ಸದಸ್ಯರಿಂದ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಸಾಮಾನ್ಯ ಕುಟುಂಬಗಳಿಗೆ ವರದಾನವಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ADVERTISEMENT

ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದುದು ಅವಶ್ಯ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ತಿ, ಹಣ, ಐಶ್ವರ್ಯ ಇದ್ದರೂ ಆರೋಗ್ಯ ಸರಿಯಿಲ್ಲದಿದ್ದರೆ ಯಾವುದೇ ಉಪಯೋಗವಿಲ್ಲ ಎಂದರು.

ಸಮಾಜಸೇವೆ ಕೇವಲ ಚುನಾವಣೆಗಳಿಗೆ ಮೀಸಲಾಗದೇ ಜೀವನದ ಭಾಗವಾಗವೇಕು. ಸೇವೆಗಳು ನಿರಂತರವಾಗಿ ನಡೆಯಬೇಕು. ಉಳ್ಳವರು ಗಳಿಸಿದ ಒಂದು ಭಾಗವನ್ನು ಸಮಾಜದ ಸೇವೆಗೆ ಮೀಸಲಿಡಬೇಕು ಎಂದರು.

ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸೌಮ್ಯಾ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರತಿಯೊಬ್ಬರು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯುವ ಸಮುದಾಯ ಸಮಾಜಕ್ಕಾಗಿ ಕೊಡುಗೆ ನೀಡುವುದನ್ನು ಬೆಳೆಸಿಕೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘ ಸಂಸ್ಥೆಗಳು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಬಿ.ಶಿವಣ್ಣ ಹಿತೈಷಿ ಬಳಗದ ವತಿಯಿಂದ ಆರೋಗ್ಯ ತಪಾಸಣೆ ಶಿಬಿರ, ನೇತ್ರ ತಪಾಸಣಾ ಶಿಬಿರ ರಕ್ತದಾನ ಶಿಬಿರ, ವೃದ್ಧರಿಗೆ ಕಂಬಳಿಗಳ ವಿತರಣೆ, ಗಿಡಗಳ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಜನರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಸೇವೆ ಪಡೆದುಕೊಂಡರು.

ಬಿ.ಶಿವಣ್ಣ ಹಿತೈಷಿ ಬಳಗದ ಗೌರವ ಅಧ್ಯಕ್ಷ ಡಾ.ವೈ.ರಮೇಶ್, ಅಧ್ಯಕ್ಷ ಬಿ.ಮುನಿರಾಜು, ಪದಾಧಿಕಾರಿಗಳಾದ ವೈ.ಸೀನಪ್ಪ, ಕೆ.ಎಂ.ರಾಮು, ಆನೇಕಲ್ ಪುರಸಭಾ ಅಧ್ಯಕ್ಷ ‍ಪಿ.ಶಂಕರ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಣ್ಣ, ಚಂದ್ರಪ್ಪ, ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಚ್ಯುತರಾಜು, ಜಿಲ್ಲಾ ಕಾರ್ಯದರ್ಶಿಗಳಾದ ನಾಗವೇಣಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶೀಲಮ್ಮ, ಬೊಮ್ಮಸಂದ್ರ ಕೈಗಾರಿಕ ಮಾಲೀಕರ ಸಂಘದ ಅಧ್ಯಕ್ಷ ಎ.ಪ್ರಸಾದ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ.ಗೋಪಾಲ್, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಜಿಗಣಿ ಮುನಿಯಪ್ಪ, ಮುಖಂಡರಾದ ಬಿದರಗುಪ್ಪೆ ಡಿ.ನರಸಿಂಹಮೂರ್ತಿ, ಪುರುಷೋತ್ತಮರೆಡ್ಡಿ, ಬಳ್ಳೂರು ಮುನಿವೀರಪ್ಪ, ದೊಡ್ಡಹಾಗಡೆ ಹರೀಶ್, ರಾಮಚಂದ್ರರೆಡ್ಡಿ, ರವಿಚೇತನ್, ಪಿ.ಧನಂಜಯ, ಜಿಗಣಿ ಪುನೀತ್, ಎಚ್.ಎಂ.ಅಂಬರೀಷ್, ಸ್ವಾತೇಗೌಡ, ಶಂಭಯ್ಯ, ಅರೇಹಳ್ಳಿ ಮಧು, ಗೌರೀಶ್, ಮುರುಗೇಶ್, ಗಣೇಶ್, ಬ್ಯಾಗಡದೇನಹಳ್ಳಿ ರಾಜಪ್ಪ, ಪುರಸಭಾ ಸದಸ್ಯರಾದ ಎನ್.ಎಸ್.ಪದ್ಮನಾಭ್, ಮಲ್ಲಿಕಾರ್ಜುನ್, ಚಂದ್ರಿಕಾ ಹನುಮಂತರಾವ್, ನಂಜುಂಡಪ್ಪ, ಶೈಲೇಂದ್ರಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.