ADVERTISEMENT

ಕ್ರೀಡೆಗಳಿಂದ ದೇಹಕ್ಕೆ ನವಚೈತನ್ಯ

ವಿಜಯಪುರ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 12:39 IST
Last Updated 7 ಸೆಪ್ಟೆಂಬರ್ 2019, 12:39 IST
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ವಿಜಯಪುರ ಪ್ರೀಮಿಯರ್ ಲೀಗ್-3 ಉದ್ಘಾಟನೆಯಲ್ಲಿ ಮುಖಂಡರು ಭಾಗವಹಿಸಿದ್ದರು
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ವಿಜಯಪುರ ಪ್ರೀಮಿಯರ್ ಲೀಗ್-3 ಉದ್ಘಾಟನೆಯಲ್ಲಿ ಮುಖಂಡರು ಭಾಗವಹಿಸಿದ್ದರು   

ವಿಜಯಪುರ: ‘ಕ್ರೀಡೆಗಳು ನಮ್ಮ ದೇಹಕ್ಕೆ ನವಚೈತನ್ಯ ನೀಡುತ್ತವೆ. ಅವುಗಳಲ್ಲಿ ತೊಡಗಿಸಿಕೊಂಡಾಗ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ’ ಎಂದು ಅಂತರರಾಷ್ಟ್ರೀಯ ಈಜು ಕ್ರೀಡಾಪಟು ವಿಶ್ವಾಸ್ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶನಿವಾರ ಬಾಲಕರು ವಿಜಯಪುರ ಬುಲ್ಸ್ ಇವರ ವತಿಯಿಂದ ವಿಜಯಪುರ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲಸದ ಒತ್ತಡಗಳಿಂದ ಖಿನ್ನತೆಗೆ ಒಳಗಾಗಿರುವವರು ಕ್ರೀಡೆ ಆಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಸಹಜಸ್ಥಿತಿಗೆ ಬರಲಿಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ADVERTISEMENT

ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆರತಿ ಗಜೇಂದ್ರ ಮಾತನಾಡಿ, ದೇಶದ ಸರ್ವತೋಮುಖ ಪ್ರಗತಿ ಯುವಜನರ ಕೈಯಲ್ಲಿದೆ. ಅವರು ಒಗ್ಗಟ್ಟಿನಿಂದ ಮುನ್ನುಗ್ಗಿದರೆ ಸಾಧನೆ ಮಾಡಲಾರದೆ ಇರುವುದು ಯಾವುದೂ ಇರುವುದಿಲ್ಲ. ಕ್ರೀಡೆಗಳು ಯುವಜನರಲ್ಲಿ ಏಕತೆ ತರಲಿಕ್ಕೆ ಸಹಕಾರಿಯಾಗಲಿವೆ ಎಂದರು.

ಏಕಾಗ್ರತೆ, ಸಂಘಟಿತವಾದ ಹೋರಾಟದಿಂದ ಜಯ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜವಾಗಿರುತ್ತವೆ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ಎದುರಾಗುವಂತಹ ಎಲ್ಲ ಒತ್ತಡಗಳನ್ನು ನಿಭಾಯಿಸಲಿಕ್ಕೆ ಕ್ರೀಡೆಗಳಿಂದ ಸಾಧ್ಯವಾಗುತ್ತದೆ ಎಂದರು.

ಮುಖಂಡ ಆರ್.ಸಿ. ಮಂಜುನಾಥ್ ಮಾತನಾಡಿ, ಕ್ರೀಡಾಕೂಟಗಳ ಆಯೋಜನೆಯಿಂದ ಸಮಾಜದಲ್ಲಿನ ಯುವಜನರನ್ನು ಸರಿದಾರಿಗೆ ತರಲಿಕ್ಕೆ ಸಾಧ್ಯವಿದೆ. ನಾಯಕತ್ವದ ಗುಣಗಳು ಬೆಳೆಯುವುದರ ಜೊತೆಗೆ, ಸಮಯಪ್ರಜ್ಞೆ ಮೂಡಿಸಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಲಿವೆ ಎಂದರು.

ಪ್ರತಿಯೊಬ್ಬ ಆಟಗಾರ ಸಮರ್ಪಣಾ ಮನೋಭಾವನೆಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ಕ್ಷಣವೂ ಬಹಳ ಎಚ್ಚರಿಕೆಯಿಂದ ಆಡುವ ಮೂಲಕ ದೈಹಿಕವಾಗಿಯೂ ಚಟುವಟಿಕೆಯಿಂದ ಕೂಡಿರಲಿಕ್ಕೆ ಸಾಧ್ಯವಾಗಲಿದೆ ಎಂದರು.

ಯಲುವಹಳ್ಳಿ ಡೇರಿ ಅಧ್ಯಕ್ಷ ಗಜೇಂದ್ರ ಮಾತನಾಡಿ, ‘ಕ್ರೀಡೆಗಳನ್ನು ಕೇವಲ ಮನರಂಜನೆಗಾಗಿ ಆಡಬಾರದು. ಅವು ನಮ್ಮಲ್ಲಿರುವ ಚೈತನ್ಯವನ್ನು ಜಾಗೃತಗೊಳಿಸುವುದರ ಜತೆಗೆ ನಮಗೆ ಅನೇಕ ವಿಷಯಗಳನ್ನು ತಿಳಿಸಿಕೊಡುತ್ತವೆ. ಸಹಾಯ, ಸಹಕಾರ, ಸಮಾಲೋಚನೆಗಳಿಂದ ಎಲ್ಲರೂ ಒಟ್ಟಾಗಿ ಶ್ರಮವಹಿಸಿದರೆ ಗೆಲುವು ಸಾಧ್ಯವಾಗುತ್ತದೆ’ ಎಂದರು.

ಮುಖಂಡರಾದ ಮಂಜುನಾಥ್, ಹರೀಶ್, ಕೆ.ಎಂ. ಮಹೇಶ್, ಮುನಾವರ್, ರವಿಕುಮಾರ್, ಜೀವನ್, ಪ್ರತೀಶ್, ಅಮ್ಜದ್, ಅನ್ಸರ್‌ ಪಾಷ, ಅಪ್ಸರ್‌ ಪಾಷ, ಪ್ರಸನ್ನಕುಮಾರ್, ಹರೀಶ್‌ಕುಮಾರ್, ಜಲಜ್‌ಕುಮಾರ್, ಡಿ.ಎಂ. ರಾಜು, ಮೋಹನ್ ಶ್ರೀವತ್ಸ, ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.