ADVERTISEMENT

ಉತ್ತರ ಭಾರತದ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ

ಕಾಡನೂರು ಕೈಮರದ ಶ್ರೀರಾಮ ಶಾಲೆ ವಿದ್ಯಾರ್ಥಿ

ನಟರಾಜ ನಾಗಸಂದ್ರ
Published 1 ಮೇ 2019, 19:40 IST
Last Updated 1 ಮೇ 2019, 19:40 IST
ನಾಗೇಂದ್ರಕುಮಾರ್‌
ನಾಗೇಂದ್ರಕುಮಾರ್‌   

ದೊಡ್ಡಬಳ್ಳಾಪುರ: ಕೆಲಸ ಅರಸುತ್ತ ಉತ್ತರ ಪ್ರದೇಶದಿಂದ ತಾಲ್ಲೂಕಿನ ಕಾಡನೂರು ಕೈಮರದ ಸಮೀಪದ ಕ್ಯಾಂಪ್ಸನ್‌ ಕಂಪನಿಯಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಸೇರಿದ್ದ ಅವದೇಶ್, ತೀತ್ರಾದೇವಿ ದಂಪತಿಯ ಮೂರನೇ ಪುತ್ರ ನಾಗೇಂದ್ರಕುಮಾರ್‌ 2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 99.04 ಅಂಕ ಪಡೆಯುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ತಾಲ್ಲೂಕಿನ ಕಾಡನೂರು ಕೈಮರದ ಶ್ರೀರಾಮ ಆಂಗ್ಲ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ನಾಗೇಂದ್ರಕುಮಾರ್‌ ಕನ್ನಡದಲ್ಲಿ 123, ಇಂಗ್ಲಿಷ್‌ 100, ಹಿಂದಿ 97, ಗಣಿತ 100, ಸಮಾಜ ವಿಜ್ಞಾನ 100, ವಿಜ್ಞಾನ 99 ಅಂಕಪಡೆದಿದ್ದಾನೆ.

2012ರಲ್ಲಿ ಉತ್ತರ ಪ್ರದೇಶದ ಚಂದೋಲಿ ಜಿಲ್ಲೆಯ ಗ್ರಾಮವೊಂದರ 15 ಕುಟುಂಬ ಕೂಲಿ ಕೆಲಸಕ್ಕಾಗಿ ತಾಲ್ಲೂಕಿಗೆ ವಲಸೆ ಬಂದು ಕೈಮರದ ಸಮೀಪ ನೆಲೆಸಿದ್ದರು. ತಂದೆ, ತಾಯಿಯೊಂದಿಗೆ ಇಲ್ಲಿಗೆ ಬಂದಿದ್ದ ನಾಗೇಂದ್ರ ಕುಮಾರ್‌ 3ನೇ ತರಗತಿಗೆ ಶ್ರೀರಾಮ ಆಂಗ್ಲ ಪ್ರೌಢ ಶಾಲೆಗೆ ದಾಖಲಾಗಿದ್ದ.

ADVERTISEMENT

ಮಾತೃ ಭಾಷೆ ಹಿಂದಿ. ಮನೆಯಲ್ಲಿ ಎಲ್ಲರಿಗೂ ಹಿಂದಿ ಹೊರತು ಬೇರೆ ಭಾಷೆ ತಿಳಿಯದಾಗಿತ್ತು. ಆದರೆ ಪ್ರಥಮ ಭಾಷೆಯಾಗಿ ಕನ್ನಡ ಆಯ್ಕೆ ಮಾಡಿಕೊಂಡು ಅಭ್ಯಾಸ ಪ್ರಾರಂಭಿಸಿದ್ದ. ಈತ ಇಂದು ಎಲ್ಲರಿಗಿಂತ ಉತ್ತಮವಾಗಿ ಕನ್ನಡ ಓದಬಲ್ಲ, ಮಾತನಾಡಬಲ್ಲ ಎಂದು ಶಿಕ್ಷಕರು ಹೇಳಿದ್ದಾರೆ.

ಎಂಜಿನಿಯರ್‌ ಆಗುವ ಆಸೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಖುಷಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ನಾಗೇಂದ್ರಕುಮಾರ್‌, ಇಲ್ಲಿಯೇ ಪಿಯು ಕಾಲೇಜಿಗೆ ಸೇರಿಕೊಂಡು ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮುಂದುವರೆಸಬೇಕು ಎಂದುಕೊಂಡಿದ್ದೇನೆ. ಎಂಜಿನಿಯರ್‌ ಆಗಬೇಕು ಎನ್ನುವ ನನ್ನ ಕನಸು ನನಸಾಗಿಸಿಕೊಳ್ಳುತ್ತೇನೆ ಎಂದು ತಿಳಿಸಿದ.

‘ನಮ್ಮ ತಂದೆ 10ನೇ ತರಗತಿವರೆಗೆ ಓದಿದ್ದಾರೆ. ತಾಯಿ ಓದಿಲ್ಲ. ಇಬ್ಬರು ಅಣ್ಣಂದಿರು ಕೂಲಿ ಕೆಸಕ್ಕಾಗಿ ದೆಹಲಿಯಲ್ಲಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಂದ ಉತ್ತರ ಪ್ರದೇಶಕ್ಕೆ ಹೋದ ನಂತರ ತಂದೆ ದೆಹಲಿಯ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಆರ್ಥಿಕವಾಗಿ ತೀರ ಸಂಕಷ್ಟದ ಸ್ಥಿತಿಯಲ್ಲೂ ಓದು ಮುಂದುವರೆಸಿದಾಗ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗಿಲ್ಲ ಎನ್ನುವ ಕಾರಣದಿಂದಾಗಿ ಸಮಾಜಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನ ನೀಡಿಲ್ಲ. ಆದರೆ ಶಾಲೆಯವರ ಸಹಕಾರ ಉತ್ತಮವಾಗಿತ್ತು’ ಎಂದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.