ADVERTISEMENT

ದೇವನಹಳ್ಳಿ| ಬೀದಿನಾಯಿ ಹಾವಳಿ ತಡೆಗೆ ಕ್ರಮ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 2:14 IST
Last Updated 26 ಆಗಸ್ಟ್ 2025, 2:14 IST
ಜಿಲ್ಲಾ ಪ್ರಾಣಿ ದಯಾ ಸಂಘದ ನವೀಕರಣ ಹಾಗೂ ಸಂಚಾರಿ ಪಶುಚಿಕಿತ್ಸಾ ಘಟಕದ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು
ಜಿಲ್ಲಾ ಪ್ರಾಣಿ ದಯಾ ಸಂಘದ ನವೀಕರಣ ಹಾಗೂ ಸಂಚಾರಿ ಪಶುಚಿಕಿತ್ಸಾ ಘಟಕದ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು   

ದೇವನಹಳ್ಳಿ: ಬೀದಿನಾಯಿಗಳ ಹಾವಳಿ ತಪ್ಪಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಿ ಮತ್ತು ದಾಳಿ ತಪ್ಪಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪ್ರಾಣಿ ದಯಾ ಸಂಘದ ನವೀಕರಣ ಹಾಗೂ ಸಂಚಾರಿ ಪಶುಚಿಕಿತ್ಸಾ ಘಟಕದ ಸಭೆಯಲ್ಲಿ ಅವರು ಮಾತನಾಡಿದರು.

ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಡಬೇಕು ಎಂದು ಸೂಚನೆ ನೀಡಿದರು.

ADVERTISEMENT

ನಾಯಿ ತಳಿ ಸಂವರ್ಧನೆ ಮತ್ತು ಮಾರಾಟ ಕೇಂದ್ರ ಕಡ್ಡಾಯವಾಗಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಪ್ರಾಣಿ ಜನನ ನಿಯಂತ್ರಣ ಕಾಯ್ದೆಯನ್ನು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ಈ ಕಾಯ್ದೆಯಡಿ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳಿಗೆ ಕ್ರಿಮಿನಾಶಕ ಮತ್ತು ಲಸಿಕೆ ಕಾರ್ಯಕ್ರಮ ಕಡ್ಡಾಯಗೊಳಿಸುತ್ತವೆ ಎಂದು ತಿಳಿಸಿದರು.

ಕಾಯ್ದೆಯ ಮುಖ್ಯ ಉದ್ದೇಶ ಹೆಚ್ಚುತ್ತಿರುವ ಬೀದಿ ನಾಯಿಗಳ ಜನನ ಪ್ರಮಾಣವನ್ನು ಕಡಿಮೆ ಮಾಡುವುದು, ರೇಬಿಸ್ ಕಾಯಿಲೆ ನಿರ್ಮೂಲನೆ ಮಾಡಲು ನಾಯಿಗಳಿಗೆ ಲಸಿಕೆ ಹಾಕುವುದಾಗಿದೆ. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಜಾನುವಾರುಗಳ ವಧೆ ಮಾಡುವಂತಿಲ್ಲ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಿ. ಸಾಧ್ಯವಾದಲ್ಲಿ ಹಸುಗಳಿಗೆ ಬೇಕಾದ ಮೇವುಗಳನ್ನು ಗೋಶಾಲೆಗಳ ಜಾಗದಲ್ಲಿ ಬೆಳೆಯಿರಿ ಎಂದು ತಿಳಿಸಿದರು.

ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಜಗದೀಶ್ ಕುಮಾರ್, ಜಿಲ್ಲಾ ಪಶುವೈದ್ಯಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.