ADVERTISEMENT

ಇತರ ಸಮಾಜದ ಅಭಿವೃದ್ಧಿಗೂ ಶ್ರಮಿಸಿ: ಚಂದ್ರಶೇಖರ ಸ್ವಾಮೀಜಿ

ಒಕ್ಕಲಿಗರ ಸಂಘದ ನೂತನ ಕೇಂದ್ರ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 13:58 IST
Last Updated 25 ಮಾರ್ಚ್ 2019, 13:58 IST
ಆನೇಕಲ್‌ನಲ್ಲಿ ಒಕ್ಕಲಿಗರ ಸಂಘದ ನೂತನ ಕೇಂದ್ರ ಕಚೇರಿಯನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹಾಗೂ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದ ಸ್ವಾಮೀಜಿ ಉದ್ಘಾಟಿಸಿದರು
ಆನೇಕಲ್‌ನಲ್ಲಿ ಒಕ್ಕಲಿಗರ ಸಂಘದ ನೂತನ ಕೇಂದ್ರ ಕಚೇರಿಯನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹಾಗೂ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದ ಸ್ವಾಮೀಜಿ ಉದ್ಘಾಟಿಸಿದರು   

ಆನೇಕಲ್: ಒಕ್ಕಲಿಗರ ಸಂಘವು ಸಮುದಾಯಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕು. ಸಮಾಜದ ಜೊತೆಗೆ ಇತರೆ ಸಮಾಜದ ಅಭಿವೃದ್ಧಿಗೂ ಕೊಡುಗೆ ನೀಡಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಆನೇಕಲ್ ವಿಧಾನಸಭಾ ಕ್ಷೇತ್ರ ಒಕ್ಕಲಿಗರ ಸಂಘದ ನೂತನ ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸನ್ಮಾರ್ಗದಲ್ಲಿ ನಡೆದರೆ ಸಮಾಜ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಒಳ್ಳೆಯ ನಡತೆ, ಗುಣಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ADVERTISEMENT

ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದ ಸ್ವಾಮೀಜಿ ಮಾತನಾಡಿ, ಧರ್ಮ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆದುಕೊಳ್ಳಬೇಕು. ಆಸೆಯೇ ದುಃಖಕ್ಕೆ ಕಾರಣ ಎಂಬ ಮಾತಿದೆ. ಹಾಗಾಗಿ ದುರಾಸೆಗೆ ಒಳಗಾಗದೇ ಇರುವ ಜೀವನವನ್ನು ಸಂತಸದಿಂದ ಹಾಗೂ ಸನ್ಮಾರ್ಗದಿಂದ ಅನುಭವಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು.

ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಎಸ್. ಪದ್ಮನಾಭ ಮಾತನಾಡಿ, ತಾಲ್ಲೂಕಿನಲ್ಲಿ ಸಮಾಜದ ಸಂಘಟನೆ ಮಾಡಿ ಉತ್ತಮ ಕಾರ್ಯಕ್ರಮ ರೂಪಿಸುವ ಚಿಂತನೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ನೆರವು, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ರೈತರಿಗೆ, ಯುವಕರಿಗೆ ಮಾರ್ಗದರ್ಶನ ಶಿಬಿರಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲು ತಯಾರಿ ನಡೆಸಲಾಗಿದೆ. ಸಂಘವು ಪಕ್ಷಾತೀತವಾಗಿ ಕೆಲಸ ಮಾಡಲಿದೆ ಎಂದರು.

ಒಕ್ಕಲಿಗರ ಸಂಘದ ತಾಲ್ಲೂಕು ಉಪಾಧ್ಯಕ್ಷರಾದ ದೊಡ್ಡಹಾಗಡೆ ಹರೀಶ್‌ಗೌಡ, ರಘುರಾಮ್, ಕಾರ್ಯದರ್ಶಿ ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಕೆಂಪರಾಜು, ಸಾಹಿತಿ ತಾ.ನಂ. ಕುಮಾರಸ್ವಾಮಿ, ಮುಖಂಡರಾದ ರಾಮೇಗೌಡ, ಚಂದ್ರಪ್ಪ, ಬಳ್ಳೂರು ನಾರಾಯಣಸ್ವಾಮಿ, ತಿಲಕ್‌ ಗೌಡ, ರಾಕೇಶ್, ವೇಣು, ವೆಂಕಟೇಶ್‌, ಶುಭಾನಂದ್, ತಿರುಮಲೇಶ್, ಸುರೇಶ್ ಗೌಡ, ಜಯದೇವ್, ಗೋಪಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.