ADVERTISEMENT

ಈಜಲು ಹೋಗಿ ವಿದ್ಯಾರ್ಥಿ ಸಾವು

ಘಟನೆ ಬಳಿಕ ಹಾಸ್ಟೆಲ್‌ ಸಿಬ್ಬಂದಿ ಪರಾರಿ: ಪೋಷಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 3:17 IST
Last Updated 29 ಡಿಸೆಂಬರ್ 2022, 3:17 IST
ದೇವನಹಳ್ಳಿಯ ದೇವನಾಯಕಹಳ್ಳಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ
ದೇವನಹಳ್ಳಿಯ ದೇವನಾಯಕಹಳ್ಳಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ   

ಚನ್ನರಾಯಪಟ್ಟಣ (ದೇವನಹಳ್ಳಿ): ಇಲ್ಲಿನ ದೇವನಾಯ ಕಹಳ್ಳಿ ಬಳಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಬುಧವಾರ ಸಮೀಪದ ದಕ್ಷಿಣ ಪಿನಾಕಿನಿ ನದಿ ಕಾಲುವೆಯಲ್ಲಿ ಈಜುಲು ತೆರಳಿದ್ದ ವೇಳೆ ವಿದ್ಯಾರ್ಥಿಯೊಬ್ಬ ನೀರುಪಾಲಾಗಿದ್ದಾನೆ.

8ನೇ ತರಗತಿಯ ವಿದ್ಯಾರ್ಥಿ ಜಿನೇದ್‌ ಬಾಷ(15) ಮೃತಪಟ್ಟವ. ಇನ್ನಿಬ್ಬರು ವಿದ್ಯಾರ್ಥಿಗಳನ್ನು ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಮತ್ತೊಬ್ಬ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಶೈಕ್ಷಣಿಕ ಪ್ರವಾಸಕ್ಕೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ತೆರಳಿದ್ದರು. ಹಾಸ್ಟೆಲ್‌ನಲ್ಲಿಯೇ ಉಳಿದುಕೊಂಡಿದ್ದ ಕೆಲವು ವಿದ್ಯಾರ್ಥಿಗಳು ಪಕ್ಕದ ತೋಟಕ್ಕೆ ತೆರಳಿ, ಅಲ್ಲಿಯ ನದಿ ಕಾಲುವೆಯಲ್ಲಿ ಈಜಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.

ADVERTISEMENT

‘ಶಿಕ್ಷಕರ ಅನುಮತಿಯೊಂದಿಗೆ ನಾವು ಈಜಲು ತೆರಳಿದ್ದೇವೆ. ಕಾಲುವೆಯಲ್ಲಿ ಮಣ್ಣು ಹೆಚ್ಚಿದ್ದ ಕಾರಣ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಅವರನ್ನು ಉಳಿಸಲು ಹೋಗಿ ನಾವು ಅಸ್ವಸ್ಥಗೊಂಡೆವು’ ಎಂದು 9ನೇ ತರಗತಿ ವಿದ್ಯಾರ್ಥಿ ಅಹಮ್ಮದ್‌ ತಿಳಿಸಿದ.

ಘಟನೆ ಬಳಿಕ ವಿದ್ಯಾರ್ಥಿ ನಿಲಯದಲ್ಲಿದ್ದ ಸಿಬ್ಬಂದಿ ಪರಾರಿಯಾಗಿದ್ದು, ಆಡಳಿತ ವರ್ಗದ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದರು. ಮೃತ ವಿದ್ಯಾರ್ಥಿಗೆ ತಾಯಿಯೊಬ್ಬರು ಇದ್ದಾರೆ ಎಂದು ತಿಳಿದುಬಂದಿದೆ.

ಹಾಸ್ಟೆಲ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಹಾಸ್ಟೆಲ್‌ಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದರು. ಸ್ಥಳೀಯರು ಮತ್ತು ಪೋಷಕರು ಹಾಸ್ಟೆಲ್‌ ಬಳಿ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.