
ಹೊಸಕೋಟೆ: ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಭದ್ರತೆ ಇಲ್ಲ. ಆದರೆ ಕಾರಾಗೃಹದಲ್ಲಿ ಖೈದಿಗಳಿಗೆ ಸ್ವಲ್ಪ ಆರೋಗ್ಯದ ಏರುಪೇರು ಆದರೂ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಸರ್ಕಾರಕ್ಕೆ ಖೈದಿಗಳಿಗಿಂತ ವಿದ್ಯಾರ್ಥಿಗಳು ಕಡೆಯಾದರೇ ಎಂದು ಭಾರತ ವಿದ್ಯಾರ್ಥಿ ಫೇಡರೇಷನ್ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಹೇಳಿದರು.
ಭಾರತ ವಿದ್ಯಾರ್ಥಿ ಫೇಡರೇಷನ್(ಎಸ್‌ಎಫ್‌ಐ) ಗುರುವಾರ ಹಮ್ಮಿಕೊಂಡಿದ್ದ ಜಾಥಾ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಾರದಲ್ಲಿ ಮಾತನಾಡಿದರು.
ಸದ್ಯ ಸರ್ಕಾರವು ಒಬ್ಬ ವಿದ್ಯಾರ್ಥಿಗೆ ₹1,850ನಂತೆ ಪ್ರತಿ ತಿಂಗಳ ಪ್ರತಿ ದಿನದ ಖರ್ಚಿಗಾಗಿ ಸರ್ಕಾರ ಸಂಬಂದಪಟ್ಟ ಇಲಾಖೆಗೆ ನೀಡುತ್ತಿದೆ. ಅಂದರೆ ಪ್ರತಿದಿನ ₹56 ಒಬ್ಬ ವಿದ್ಯಾರ್ಥಿಗೆ ಪಾವತಿ ಆಗುತ್ತಿದೆ. ಆದರೆ ಕೊಲೆ, ಸುಲಿಗೆ, ಇತರೆ ಅಪರಾಧ ಎಸಗಿ ಕಾರಾಗೃಹಗಳಿಲ್ಲಿರುವ ಖೈದಿಗಳಿಗೆ ತಿಂಗಳಿಗೆ ಸದ್ಯ ₹4,500 ನೀಡುತ್ತಿದೆ ಎಂದು ತಿಳಿಸಿದರು.
ಇದೇ ತಿಂಗಳ 29 , 30 ರಂದು 200 ವಸತಿ ನಿಲಯಗಳ ಪ್ರತಿನಿದಿಗಳು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಾವೇರಿಯಲ್ಲಿ ಸಮಾವೇಶ ಹಮ್ಮಿಕೊಳ್ಳುತ್ತಿದ್ಡು, ಇದರ ಭಾಗವಾಗಿ ರಾಜ್ಯದ ನಾನಾ ಭಾಗದ ವಸತಿ ನಿಲಯಗಳ ಪೋಸ್ಟ್ ಮೆಟ್ರಿಕ್ ವಸತಿನಿಲಯಗಳಲ್ಲಿನ ವಿದ್ಯಾರ್ಥಿಗಳ ಜೊತೆ ಮುಖಮುಖಿಯಾಗಿ ಅವರ ಅಹವಾಲು ಸ್ವೀಕರಿಸಿ ಸಮಾವೇಶದಂದು ಸರ್ಕಾರಕ್ಕೆ ವಸತಿ ನಿಲಯಗಳ ಬಲವರ್ಧನೆ ಮತ್ತು ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ ವರದಿ ಸಿದ್ದಪಡಿಸಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ವಸತಿನಿಲಯ ಪ್ರವೇಶಕ್ಕೆ ಪ್ರತಿ ವರ್ಷ 4 ಲಕ್ಷಕ್ಕೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಆದರೆ 75,000 ವಿದ್ಯಾರ್ಥಿಗಳ ಮಿತಿ ಇದೆ. ಆದರೆ ಹೆಚ್ಚುವರಿಯಾಗಿ ಒಟ್ಟು 1.15 ಅರ್ಜಿಗಳಿಗೆ ಮಾತ್ರ ವಸತಿನಿಲಯಗಳಲ್ಲಿ ಪ್ರವೇಶ ನೀಡಲಾಗುತ್ತಿದೆ. ಇನ್ನುಳಿದವರಿಗೆ ಅವಕಾಶ ಸಿಗುವುದಿಲ್ಲ. ಇನ್ನುಮುಂದೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಪ್ರವೇಶ ನೀಡಬೇಕು ಎಂದು ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಶಾಲಾ–ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹಾಗಾಗಿ ಪ್ರತಿ ಕಾಲೇಜಿನಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತುವ ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿ ರಚನೆ ಆಗಬೇಕು.– ಶಿವಪ್ಪ ಎನ್. ಅಂಬ್ಳಿಕಲ್, ಅಧ್ಯಕ್ಷ ಎಸ್‌ಎಫ್‌ಐ
ವಸತಿನಿಲಯಗಳಲ್ಲಿ ಇರುವ ಪ್ರತಿ ವಿದ್ಯಾರ್ಥಿಗೆ ಸರ್ಕಾರ ನೀಡುತ್ತಿರುವ ₹1850 ಅನ್ನು ₹4500ಗೆ ಏರಿಕೆ ಮಾಡಬೇಕು.– ನಟರಾಜ್, ಮುಖಂಡ ಎಸ್‌ಎಫ್‌ಐ
ರಾಜ್ಯಮಟ್ಟದ ಶೈಕ್ಷಣಿಕ ಜಾಥಾ
ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಮತ್ತು ವಸತಿ ನೀಲಯಗಳ ಬಲವರ್ಧನೆಗಾಗಿ ಭಾರತ ವಿದ್ಯಾರ್ಥಿ ಫೇಡರೇಷನ್ ರಾಜ್ಯದಲ್ಲಿ ಅ.13 ರಿಂದ 28ರ ವರೆಗೆ ಎರಡು ಹಂತಗಳಲ್ಲಿ ಬೇರೆ ಭಾಗಗಳಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಜಾಥಾ ಹಮ್ಮಿಕೊಂಡಿದೆ.
ಇದರ ಭಾಗವಾಗಿ 2ನೇ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪೂರ್ವ ಮತ್ತು ಪಶ್ಚಿಮದ ಜನರನ್ನು ಬೆಸೆಯುವ ಕಾರಣ ಕೋಲಾರದ ಮುಳಬಾಗಿಲಿನಿಂದ ದಕ್ಷಿಣ ಕನ್ನಡದ ಹೊನ್ನಾವರದ ವರೆಗೆ ರಾಜ್ಯಮಟ್ಟದ ಶೈಕ್ಷಣಿಕ ಜಾಥಾ ನಡೆಸಲಾಗುತ್ತಿದೆ. ಗುರುವಾರ ರಾಜ್ಯಮಟ್ಟದ ಶೈಕ್ಷಣಿಕ ಜಾಥಾವು ಹೊಸಕೋಟೆ ತಲುಪಿದೆ. ಇದೇ ಸಂದರ್ಭದಲ್ಲಿ ತಾಲ್ಲೂಕಿನ ಎಸ್‌ಎಫ್‌ಐ ಮುಖಂಡರು ದಲಿತ ಹಕ್ಕುಗಳು ಹೋರಾಟ ಸಮಿತಿ ಮುಖಂಡರು ಹಾಗೂ ಹೊಸಕೋಟೆ ವಸತಿ ನಿಲಯ ವಿದ್ಯಾರ್ಥಿಗಳು ಅವರನ್ನು ಸ್ವಾಗತಿಸಿ ವಿಶೇಷ ವಿಶೇಷಾ ಉಪನ್ಯಾಸ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು.
ಖೈದಿಗಳಿರುವ ಒಲವು–ವಿದ್ಯಾರ್ಥಿಗಳಿಗಿಲ್ಲ
ವಿದ್ಯಾರ್ಥಿಗಳಿರುವ ವಸತಿನಿಲಯಗಳಿಗೆ ಕಾರಗೃಹದ ಖೈದಿಗಳಿಗಿಂತ ಕಡಿಮೆ ಅನುದಾನ ನಿಡುತ್ತಿರುವುದು ದುರಂತ. ಖೈದಿಗಳ ಆರೈಕೆಗೆ ತೋರವ ಕಾಳಜಿ ಒಲವು ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ ಹಿಂದುಳಿದ ವಿದ್ಯಾರ್ಥಿಗಳು ಇರುವ ವಸತಿ ನಿಲಯಗಳ ಬಗ್ಗೆ ಇದ್ದಂತೆ ಕಾಣುತ್ತಿಲ್ಲ.– ಮುನಿರಾಜು, ಮುಖಂಡ ಎಸ್‌ಎಫ್‌ಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.