ADVERTISEMENT

ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬನ್ನಿ: ತಹಶೀಲ್ದಾರ್ ಎಲ್.ಎಂ.ನಂದೀಶ್

​ಪ್ರಜಾವಾಣಿ ವಾರ್ತೆ
Published 12 ಮೇ 2019, 13:18 IST
Last Updated 12 ಮೇ 2019, 13:18 IST
ಕಾರ್ಯಾಗಾರವನ್ನು ಮಧುಗಿರಿ ತಾಲ್ಲೂಕಿನ ತಹಶೀಲ್ದಾರ್ ಎಲ್.ಎಂ.ನಂದೀಶ್‍ ಉದ್ಘಾಟಿಸಿದರು
ಕಾರ್ಯಾಗಾರವನ್ನು ಮಧುಗಿರಿ ತಾಲ್ಲೂಕಿನ ತಹಶೀಲ್ದಾರ್ ಎಲ್.ಎಂ.ನಂದೀಶ್‍ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬಂದು, ಸೂಕ್ತ ಮಾರ್ಗದರ್ಶನ ಹಾಗೂ ಪರಿಶ್ರಮದಿಂದ ಮುನ್ನಡೆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಎಂದು ಮಧುಗಿರಿ ತಾಲ್ಲೂಕಿನ ತಹಶೀಲ್ದಾರ್ ಎಲ್.ಎಂ.ನಂದೀಶ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ರಸ್ತೆಯಲ್ಲಿನ ಜ್ಞಾನಜ್ಯೋತಿ ಕೋಚಿಂಗ್ ಸೆಂಟರ್ ವತಿಯಿಂದ ಭಾನುವಾರ ನಡೆದ ಕೆಎಎಸ್, ಪಿಎಸ್‍ಐ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಕೆಎಎಸ್ ಕಬ್ಬಿಣದ ಕಡಲೆಯಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮವಂತೂ ಇರಲೇಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೆ ಮೊದಲು ಕೀಳರಿಮೆ ಹೋಗಬೇಕು. ಐಎಎಸ್ ಅಧಿಕಾರಿ ಡಿ.ಕೆ.ರವಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನವರೇ ಆದ ಲೋಕಾಯುಕ್ತ ಉಪಅಧೀಕ್ಷಕರಾಗಿದ್ದ ರವಿ ಅವರು ಗ್ರಾಮೀಣ ಪ್ರತಿಭೆಗಳಾಗಿದ್ದರು’ ಎಂದರು.

ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮೊದಲು ಮಾನಸಿಕವಾಗಿ ಸಿದ್ದವಾಗಬೇಕು. ಈ ಮೊದಲು ನನಗೂ ಸಹ ಕೆಎಎಸ್ ಪರೀಕ್ಷೆ ಎದುರಿಸುವ ಬಗ್ಗೆ ಆತಂಕವಿತ್ತು. ಆಗ ಗುರುಗಳ ಮಾರ್ಗದರ್ಶನ ಹಾಗೂ ಪರಿಶ್ರಮ ನನ್ನ ಯಶಸ್ಸಿಗೆ ಕಾರಣವಾಯಿತು ಎಂದ ಅವರು ಕೆಎಎಸ್ ಪರೀಕ್ಷಾ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಬಿ.ಎನ್.ದೇವರಾಜ್, ‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಇದೆ. ಇದನ್ನು ಮನಗಂಡು ಜ್ಞಾನಜ್ಯೋತಿ ಕೋಚಿಂಗ್ ಸೆಂಟರ್‌ನಿಂದ ಬಿಂದು ಅವರ ಮಾರ್ಗದರ್ಶನದಲ್ಲಿ ಕೆಎಎಸ್, ಪಿಎಸ್‍ಐ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ವಾಣಿಜ್ಯ ಉದ್ದೇಶ ಇಲ್ಲ. ಕನಿಷ್ಠ ಶುಲ್ಕದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಭ್ಯರ್ಥಿಗಳಿಗೆ ಗ್ರಂಥಾಲಯ, ದೈಹಿಕ ಸದೃಢತೆಗೆ ಮಾರ್ಗದರ್ಶನ, ಸಾಧಕರೊಂದಿಗೆ ಉಪನ್ಯಾಸ ಹಾಗೂ ರಾಜ್ಯದ ವಿವಿಧೆಡೆಗಳಿಂದ ಬಂದವರಿಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದರು.

ಸಂಘಟಕರಾದ ಬಿಂದು, ಸಂಪನ್ಮೂಲ ವ್ಯಕ್ತಿಗಳಾದ ಅರುಣ್‌ಕುಮಾರ್, ಸಿದ್ಧಾರ್ಥ, ಪುರುಷೋತ್ತಮ್, ರಘುವೀರ್, ಶಶಿಶೇಖರ್, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.