ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ ಆನೇಕಲ್ ವಿಧಾನಸಭಾ ಕ್ಷೇತ್ರದಿಂದ ತಾಲ್ಲೂಕಿನ ಮರಸೂರು ಗೇಟ್‌ನಲ್ಲಿರುವ ಸ್ಫೂರ್ತಿ ಕಾಲೇಜಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕವನಗಳ ವಾಚನ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳು ಬಾಬಾ ಸಾಹೇಬ್ ಕುರಿತಾಗಿ ರಚಿಸಿದ ಕವಿತೆಗಳನ್ನು ವಾಚನ ಮಾಡಿದರು.
ಕವನ ಸ್ಪರ್ಧೆಯಲ್ಲಿ ವಿಜೇತರಾದ ಗಂಧರ್ವ ರಾವ್ ರಾವತ್, ಶಿವರಾಜ್, ಮಧು, ಆಶಾ, ಮಧುಸೂದನ್, ಸೂರ್ಯಕಿರಣ್ ಅವರಿಗೆ ಬಹುಮಾನ ವಿತರಿಸಲಾಯಿತು.
ಇದೇ ವೇಳೆ ಲೇಖಕಿ ವಿಶಾಲ ಆರಾಧ್ಯ ಅವರ ‘ಜೀರ್ ಜೀರ್ ಜೀರ್ಜಿಂಬೆ’ ಕಥಾ ಸಂಕಲನ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಶಿವಣ್ಣ, ಸಾಹಿತ್ಯದಿಂದ ಸಮಾಜದ ಬದಲಾವಣೆ ಸಾಧ್ಯ. ಹಾಗಾಗಿ ಯುವ ಸಮುದಾಯ ಸಾಹಿತ್ಯ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ಮೂಲಕ ಸಮಾಜವನ್ನು ಜಾಗೃತಗೊಳಿಸಬೇಕು ಎಂದರು.
ಶಾಲಾ–ಕಾಲೇಜು ಹಂತಗಳಲ್ಲಿ ವಿದ್ಯಾರ್ಥಿಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು. ಸಾಹಿತ್ಯ ಕ್ಷೇತ್ರದತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಶಾಲಾ-ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ನಿರಂತರವಾಗಿ ರೂಪಿಸಬೇಕೆಂದು ಹೇಳಿದರು.
ಲೇಖಕ ಡಾ. ಬೇಲೂರು ರಘುನಂದನ್, ಸಾಹಿತ್ಯವು ಅಲ್ಪ ಮಾನವನನ್ನು ವಿಶ್ವಮಾನವನನ್ನಾಗಿ ಮಾಡುತ್ತದೆ. ಹಾಗಾಗಿ ಶೈಕ್ಷಣಿಕ ಕ್ಷೇತ್ರವು ಶಿಕ್ಷಣದ ಜೊತೆಗೆ ಕಲೆ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರ್ ನಗರ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಮೂರ್ತಿ, ತಾಲೂಕು ಘಟಕದ ಅಧ್ಯಕ್ಷ ಆದೂರ್ ಪ್ರಕಾಶ್, ಚಿನ್ಮಯ ಸೇವಾ ಸಂಸ್ಥೆಯ ಚಿನ್ನಪ್ಪ ಹೆಗಡೆ, ಶಿಕ್ಷಣ ಸಂಪನ್ಮೂಲ ವ್ಯಕ್ತಿ ಜಿ.ಮುನಿರಾಜು, ಯೋಗ ಶಿಕ್ಷಕರದ ಶಾಮಣ್ಣ ಸ್ವಾಮಿ, ರಾಮಣ್ಣ ಸ್ವಾಮಿ, ಸ್ಫೂ ಕಾಲೇಜು ಆಡಳಿತ ಮಂಡಳಿಯ ಸರಸ್ವತಿ ಗೋಪಾಲ್ ರೆಡ್ಡಿ, ವಿನಯ್, ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್, ಪರಿಷತ್‌ನ ಅಪ್ಸರ ಅಲಿಖಾನ್, ಚುಟುಕು ಶಂಕರ್, ನಾರಾಯಣ್, ಶ್ರೀವಲ್ಲಿ ಶೇಷಾದ್ರಿ, ಸತ್ಯವತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.