ADVERTISEMENT

‘ಮೇವಿನ ಕತೆ ಏನು ಮಾಡಿದಿರಿ?’

ತಾಲ್ಲೂಕು ಪಂಚಾಯಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 13:20 IST
Last Updated 23 ಫೆಬ್ರುವರಿ 2019, 13:20 IST
ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್‌ಗೌಡ 
ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್‌ಗೌಡ    

ದೇವನಹಳ್ಳಿ: ‘ಮೇವಿನ ಕತೆ ಏನು. ಖರೀದಿ ಮಾಡಿದ್ದೀರೋ ಇಲ್ಲವೋ’... ಇದು ಶನಿವಾರ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರುಪಕ್ಷಾತೀತವಾಗಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಬರಗಾಲ ಕಳೆದ ವರ್ಷಕ್ಕಿಂತ ಈ ಬಾರಿ ತೀವ್ರವಾಗಿದೆ. ಪಶು ಇಲಾಖೆ ಮೇವಿನ ಬೀಜ ವಿತರಿಸಿದ ತಕ್ಷಣದಲ್ಲಿಯೇ ಮೇವು ಸಿಗುವುದಿಲ್ಲ. ಸರ್ಕಾರ ಮೇವಿಗೆ ಏನು ಕ್ರಮ ತೆಗೆದುಕೊಂಡಿದೆ. ಮುಂಜಾಗ್ರತಾ ಕ್ರಮ ಏನು. ಮೇವು ಖರೀದಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆಯೇ ಇಲ್ಲವೆ ಎಂದು ಗ್ರೇಡ್–2 ತಹಶೀಲ್ದಾರ್ ಬಾಲಕೃಷ್ಣರನ್ನು ಪ್ರಶ್ನಿಸಿದರು.ಇದನ್ನು ಅಧ್ಯಕ್ಷೆ ಭಾರತಿ ಲಕ್ಷ್ಮಿಣ್‌ಗೌಡ, ಸದಸ್ಯರಾದ ವೆಂಕಟೇಶ್, ಗೋಪಾಲಕೃಷ್ಣ ಬೆಂಬಲಿಸಿದರು.

‘ಟೆಂಡರ್ ಅಗಿದೆಯೋ ಇಲ್ಲವೋ ಗೊತ್ತಿಲ್ಲ. ಆಗಬಹುದು’ ಎಂದು ಪಶು ಇಲಾಖೆ ಸಹಾಯ ನಿರ್ದೇಶಕ ರಮೇಶ ಮತ್ತು ಗ್ರೇಡ್ 2 ತಹಶೀಲ್ದಾರ್ ಬಾಲಕೃಷ್ಣ ಹೇಳಿದರು.

ADVERTISEMENT

ಕತೆ ಪುರಾಣ ಬೇಡ ಮೇವು ಖರೀದಿಸಲು ಮೊದಲು ಅನುದಾನ ಬಿಡುಗಡೆಯಾಗಬೇಕು ನಂತರ ಟೆಂಡರ್ ಪ್ರಕ್ರಿಯೆ ಎಷ್ಟು ಟನ್ ಮೇವಿದೆ ಎಷ್ಟುವಾರಕ್ಕೆ ಮೇವು ನಿಭಾಯಿಸಲು ಸಾಧ್ಯ, ಮೇವು ಖರೀದಿಸಲೇಬೇಕು ಎಂದು ಸದಸ್ಯರು ಒಕ್ಕೋರಲಿನಿಂದ ಪಟ್ಟು ಹಿಡಿದರು.

ಸದಸ್ಯರಾದ ಗೊಪಾಲಸ್ವಾಮಿ, ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಖಾಸಗಿ ಓಜೋನ್ ಕಂಪನಿ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿ ಬಂದ್ ಮಾಡಿದೆ. ಈ ಹಿಂದಿನ ಸಭೆಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಈವರೆಗೆ ಆಗಿಲ್ಲ ಎಂದರೆ ಕಂದಾಯ ಅಧಿಕಾರಿಗಳಾದ ನೀವು ಏನು ಮಾಡುತ್ತಿದ್ದೀರಾ ಸ್ಥಳೀಯ ಗ್ರಾಮ ಲೆಕ್ಕಿಗ ಏನು ಮಾಡುತ್ತಿದ್ದಾರೆ. ಸರ್ಕಾರಿ ಜಾಗ ಯಾರು ಬೇಕಾದರೂ ಕಬಳಿಸಬಹುದಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ಬಾಲಕೃಷ್ಣ ಮಾತನಾಡಿ, ‘ಏನೂ ಮಾಡಲು ಬರುವುದಿಲ್ಲ. ಒತ್ತುವರಿ ತೆರವುಗೊಳಿಸಲು ಕನಿಷ್ಠ ₹5 ಲಕ್ಷ ಬೇಕು. ಎಲ್ಲಿಂದ ತರಲಿ ನಾನು’ ಎಂದು ಉತ್ತರ ನೀಡಿದರು.

ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಕೊಯಿರಾ ಗ್ರಾಮದಲ್ಲಿ ಬಡವರಿಗೆ ನಿವೇಶನ ಮತ್ತು ಸ್ಮಶಾನಕ್ಕೆ ಜಾಗ ಗುರುತಿಸಿ ಎಂದು ಮನವಿ ಮಾಡಿ ವರ್ಷ ಕಳೆದಿದೆ. ಜಾಗ ಎಲ್ಲಿದೆ ಎಂದು ಗೊತ್ತಿಲ್ಲ. ಸರ್ವೆ ಮಾಡಿ ಜಾಗ ತೋರಿಸಿ. ಹಣ ದಫನು ಮಾಡಲು ಜಾಗವಿಲ್ಲದೆ ಕೆರೆಯಂಗಳದಲ್ಲಿ ದಫನ ಮಾಡಲಾಗುತ್ತಿದೆ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ತಹಶೀಲ್ದಾರ್ ಪ್ರತಿಕ್ರಿಯಿಸಿ, ಶೀಘ್ರದಲ್ಲೇ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.