ADVERTISEMENT

ಬಡವರಿಗೆ ಆಹಾರ ಪೂರೈಕೆ ಕೈಗೊಳ್ಳಿ

ಆನೇಕಲ್: ಶಾಸಕ ಬಿ. ಶಿವಣ್ಣ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 14:21 IST
Last Updated 30 ಮಾರ್ಚ್ 2020, 14:21 IST
ಆನೇಕಲ್‌ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಶಾಸಕ ಬಿ.ಶಿವಣ್ಣ ಮಾತನಾಡಿದರು
ಆನೇಕಲ್‌ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಶಾಸಕ ಬಿ.ಶಿವಣ್ಣ ಮಾತನಾಡಿದರು   

ಆನೇಕಲ್: ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಅಡುಗೆ ಕೇಂದ್ರಗಳನ್ನು ತೆರೆಯುವ ಮೂಲಕ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರ್ಮಿಕರು, ಬಡವರು, ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಶಿವಣ್ಣ ತಿಳಿಸಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕುಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟುವ ಸಲುವಾಗಿ ಲಾಕ್‌ಡೌನ್‌ ಮಾಡಿರುವುದರಿಂದ ಹಲವಾರು ಮಂದಿ ಆಹಾರದ ಸಮಸ್ಯೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಬೇರೆ ಬೇರೆ ಭಾಗಗಳಿಂದ ವಲಸೆ ಬಂದಿರುವ ಕೂಲಿಕಾರ್ಮಿಕರು, ನಿರ್ಗತಿಕರಿಗೆ ಆಹಾರ ನೀಡುವುದು ಎಲ್ಲರ ಜವಾಬ್ದಾರಿ. ಯಾರೂ ಸಹ ಹಸಿವಿನಿಂದ ಬಳಲಬಾರದು. ಹಾಗಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಎರಡು ಅವಧಿಗೆ ತಲಾ 500 ಊಟದ ವ್ಯವಸ್ಥೆ ಮಾಡಿ ಪಾರ್ಸೆಲ್‌ ಮಾಡಿ ಅರ್ಹರಿಗೆ ತಲುಪಿಸಲು ಪಂಚಾಯಿತಿಗಳು ಕ್ರಮ ಕೈಗೊಳ್ಳಬೇಕು. ವಾಟರ್‌ಮನ್‌ಗಳು ಮತ್ತಿತರ ಸಿಬ್ಬಂದಿಯನ್ನು ಬಳಸಿಕೊಂಡು ಅರ್ಹರಿಗೆ ಆಹಾರ ನೀಡಬೇಕು. ಬೇಡಿಕೆಗೆ ಅನುಸಾರ ಊಟ ಸಿದ್ದಪಡಿಸಿಕೊಳ್ಳಬೇಕು. ಅಂಗನವಾಡಿ ಅಡುಗೆ ಕೇಂದ್ರಗಳನ್ನು ಆಹಾರ ಸಿದ್ಧಪಡಿಸುವ ಕೇಂದ್ರಗಳಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ADVERTISEMENT

ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳು ಸನ್ನದರಾಗಬೇಕು. ಸಮರೋಪಾದಿಯಲ್ಲಿ ಸೈನಿಕರಂತೆ ಕೆಲಸ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿಗೂ ತಾಲ್ಲೂಕು ಮಟ್ಟದ ಅಧಿಕಾರಿಯನ್ನು ನೋಡಲ್‌ ಅಧಿಕಾರಿಗಳಾಗಿ ನೇಮಕ ಮಾಡಿ ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸಂಬಂಧ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅನುಪಾಲನೆ ಮಾಡುವಂತೆ ಸೂಚಿಸಿದರು. ಪ್ರತಿದಿನ ಅಲ್ಲಿಯ ಪ್ರಗತಿಯ ವರದಿಯನ್ನು ತಾಲ್ಲೂಕು ಆಡಳಿತಕ್ಕೆ ನೀಡಬೇಕು. ಸ್ವಚ್ಛತೆ, ಆಹಾರ ಪೂರೈಕೆ, ಜಾಗೃತಿ, ಸೋಂಕು ಕಂಡು ಬಂದಲ್ಲಿ ಮಾಹಿತಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಂಬಂಧ ಅನುಪಾಲನೆ ಮಾಡುವಂತೆ ತಿಳಿಸಿದರು.

‘ಮೆಡಿಕಲ್‌ ಸ್ಟೋರ್‌ಗಳಲ್ಲಿ ಔಷಧಿಗಳು ಯಾವುದೇ ಕೊರತೆಯಿಲ್ಲದಂತೆ ದೊರೆಯಲು ಆರೋಗ್ಯ ಇಲಾಖೆ ಮತ್ತು ಪೊಲೀಸರು ನಿಗಾ ವಹಿಸಬೇಕು. ದಿನ ಬಳಕೆಯ ವಸ್ತುಗಳು ಕೊರತೆಯಾಗದಂತೆ ಗಮನಿಸಬೇಕು. ಯಾವುದೇ ಸಾಮಗ್ರಿಗಳಿಗೆ ಕೊರತೆಯಿಲ್ಲ. ಜನರು ಆತಂಕ ಪಡುವ ಅವಶ್ಯಕತೆಯಿಲ್ಲ’ ಎಂದರು.

‘ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಾಸ್ಕ್‌ ಮತ್ತು ಸ್ಯಾನಿಟೈಜರ್‌ ಪೂರೈಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು, ಕೈಗಾರಿಕೆಯ ಸಿಎಸ್‌ಆರ್‌ ನಿಧಿಗಳನ್ನು ಬಳಕೆ ಮಾಡುವಂತೆ ಗ್ರಾಮ ಪಂಚಾಯಿತಿ ಸೂಚಿಸಿದರು. ಈ ನಿಟ್ಟಿನಲ್ಲಿ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಿನ್‌ ಪ್ರತಿಷ್ಠಾನ ಮತ್ತು ರೆಡ್‌ ಕ್ರಾಸ್‌, ಬಿಲ್‌ಫೋರ್ಜ್‌ ಸಂಸ್ಥೆಗಳ ನೆರವಿನಿಂದ ಮಾಸ್ಕ್‌ ಮತ್ತು ಸೋಪು ಪೂರೈಸಲಾಗಿದೆ. ಇದೇ ಮಾದರಿಯನ್ನು ಎಲ್ಲಾ ಗ್ರಾಮ ಪಂಚಾಯಿತಿಗಳು ಅಳವಡಿಸಿಕೊಳ್ಳಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ ಮಾತನಾಡಿ, ‘ಗ್ರಾಮ ಪಂಚಾಯಿತಿಗಳು ಸಂಕಷ್ಟದ ಅವಧಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಸಾರ್ವಜನಿಕರ ಸಹಕಾರ ಪಡೆದು ಸಮಸ್ಯೆ ಎದುರಿಸಬೇಕು. ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು. ಲಭ್ಯವಿರುವ ಎಲ್ಲಾ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಮಟ್ಟದಲ್ಲಿ ಕಾರ್ಯಪಡೆಯನ್ನು ಸಜ್ಜುಗೊಳಿಸಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಳ್ಳಲು ಸಲಹೆ ಮಾಡಿದರು. ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜ್ಞಾನಪ್ರಕಾಶ್‌, ಪುರಸಭಾ ಸದಸ್ಯ ಎನ್‌.ಎಸ್.ಪದ್ಮನಾಭ್‌, ರವಿಚೇತನ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಪುಷ್ಪರಾಜು, ಸಮಂದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಿ.ವಿ.ರೆಡ್ಡಿ, ಮುಖಂಡರಾದ ದೊಡ್ಡಹಾಗಡೆ ಹರೀಶ್‌ ಗೌಡ, ಜಿ.ಗೋಪಾಲ್‌, ಶೈಲೇಂದ್ರಕುಮಾರ್, ಲಕ್ಷ್ಮೀನಾರಾಯಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.