ADVERTISEMENT

ಬಿಜೆಪಿ–ಜೆಡಿಎಸ್‌ ಹೊಂದಾಣಿಕೆ: ಅಪ್ಪಯ್ಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 2:14 IST
Last Updated 5 ನವೆಂಬರ್ 2020, 2:14 IST
ದೊಡ್ಡಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌. ಅಪ್ಪಯ್ಯ ಮಾತನಾಡಿದರು
ದೊಡ್ಡಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌. ಅಪ್ಪಯ್ಯ ಮಾತನಾಡಿದರು   

ದೊಡ್ಡಬಳ್ಳಾಪುರ: ‘ತಾಲ್ಲೂಕಿನ ಜೆಡಿಎಸ್‌ ಪಕ್ಷದಲ್ಲಿ ಎರಡು ಬಣಗಳು ಇರುವುದು ಸತ್ಯ. ನಾವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಎದುರಿಸುತ್ತಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌. ಅಪ್ಪಯ್ಯ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿ. ಮುನೇಗೌಡ ಅವರು ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾದಾಗಿನಿಂದಲೂ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದರು.

ಸಹಕಾರ ಕ್ಷೇತ್ರದಲ್ಲಿ ಅನುಭವ ಇರುವ ಅಭ್ಯರ್ಥಿಗಳನ್ನು ಟಿಎಪಿಸಿಎಂಎಸ್‌ ಚುನಾವಣೆಗೆ ಸ್ಪರ್ಧಿಸುವಂತೆ ಆಯ್ಕೆ ಮಾಡಲು ಪಟ್ಟಿ ಮಾಡಲಾಗಿತ್ತು. ಆದರೆ, ನಮ್ಮ ಪಟ್ಟಿಗೆ ಯಾವುದೇ ಮಾನ್ಯತೆ ನೀಡಲಿಲ್ಲ. ಚುನಾವಣೆಗೆ ಸಂಬಂಧಿಸಿದ ಸಭೆಗೂ ಆಹ್ವಾನಿಸಿಲ್ಲ. ಅವರಿಗೆ ಬೇಕಾದವರಿಗೆ ಟಿಕೆಟ್‌ ನೀಡಿದ್ದಾರೆ. ಹೀಗಾಗಿ ನಾವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷದಿಂದ 5 ಮಂದಿ ಸ್ಪರ್ಧಿಸಿದ್ದಾರೆ ಎಂದರು.

ADVERTISEMENT

ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಬಿಸಿಎಂ ‘ಎ’ ಕ್ಷೇತ್ರಕ್ಕೆ ರಾ. ಬೈರೇಗೌಡ, ಸಾಮಾನ್ಯ ಕ್ಷೇತ್ರದಿಂದ ಜಿ.ಕೆ. ದೇವರಾಜ್, ಅಶ್ವತ್‌ನಾರಾಯಣ, ಟಿ.ವಿ. ಲಕ್ಷ್ಮಿನಾರಾಯಣ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಆನಂದ್, ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ರತ್ನಮ್ಮ, ಉಮಾದೇವಿ, ಬಿಸಿಎಂ ‘ಬಿ’ ಸ್ಥಾನಕ್ಕೆ ಪಿ.ಎಂ. ಪ್ರಕಾಶ್ ‌ಕುಮಾರ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಪ್ರೇಮ್‌ಕುಮಾರ್ ಅಭ್ಯರ್ಥಿಗಳಾಗಿದ್ದಾರೆ ಎಂದರು.

ಜೆಡಿಎಸ್‌ ತೂಬಗೆರೆ ಹೋಬಳಿ ಘಟಕದ ಅಧ್ಯಕ್ಷ ದೇವರಾಜ್ ಮಾತನಾಡಿ, ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಎರಡು ಬಣಗಳು ಒಂದಾಗಿ ಚುನಾವಣೆ ಎದುರಿಸಲು ತಿಳಿಸಲಾಗಿತ್ತು. ಆದರೆ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಮುನೇಗೌಡ ಅವರು ನಮ್ಮ ಬೆಂಬಲಿಗರಿಗೆ ಮಾತ್ರ ಟಿಕೆಟ್‌ ನೀಡಿದ್ದಾರೆ. ನಿಷ್ಟಾವಂತರಿಗೆ ಮನ್ನಣೆ ನೀಡಿಲ್ಲ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಮನಸ್ಥಿತಿ ಅವರಿಗೆ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪುಟ್ಟಬಸವರಾಜು, ತಳವಾರ್ ನಾಗರಾಜು, ಬಿಡಿಗೇರೆ ಗೌರೀಶ್, ರಾಮಣ್ಣ, ಚಂದ್ರಶೇಖರ್, ಹರ್ಷ, ಕುಂಟನಹಳ್ಳಿ ಮಂಜುನಾಥ್, ಕುಮಾರ್, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.