
ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಚುನಾವಣೆ ನವಂಬರ್ 2 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಗುರುವಾರದಿಂದ ಆರಂಭವಾಗಿದೆ. ಮೊದಲ ದಿನವೇ ‘ಎ’ ತರಗತಿಯಿಂದ 9 ಜನ ಹಾಗೂ ‘ಬಿ’ ತರಗತಿಯಿಂದ 26 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಆರ್.ರಾಮಾಂಜಿನಪ್ಪ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅ.25 ಕೊನೆಯ ದಿನ. ನಾಮಪತ್ರ ಹಿಂದಕ್ಕೆ ಪಡೆಯಲು ಅ.27 ಕೊನೆಯ ದಿನ.
13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್‌ನಲ್ಲಿ ‘ಎ’ ತರಗತಿಗೆ 5 ಸ್ಥಾನ, ‘ಬಿ’ ತರಗತಿಗೆ 8 ಸ್ಥಾನಗಳಿವೆ. 8 ಜನ ನಿರ್ದೇಶಕ ಸ್ಥಾನಗಳ ಪೈಕಿ 2 ಸಾಮಾನ್ಯ ಅಭ್ಯರ್ಥಿಗಳಿಗೆ,1 ಬಿಸಿಎಂ ‘ಬಿ’, 1 ಬಿಸಿಎಂ ‘ಎ’, 2 ಮಹಿಳಾ ಅಭ್ಯರ್ಥಿಗಳಿಗೆ, 1 ಪರಿಶಿಷ್ಟ ಜಾತಿ, 1 ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದೆ. ಉಳಿದಂತೆ ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ 1 ಹಾಗೂ ಸರ್ಕಾರದ ನಾಮನಿರ್ದೇಶನದ ಮೂಲಕ ಒಬ್ಬರು ನೇಮಕವಾಗಲಿದೆ.
ತಾಲ್ಲೂಕಿನಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೆ, ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಯಾರೊಂದಿಗೂ ಮೈತ್ರಿ ಇಲ್ಲದೆ ಎಲ್ಲಾ 13 ಸ್ಥಾನಗಳಿಗೂ ಸ್ವತಂತ್ರ್ಯವಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ‘ಎ’ ತರಗತಿಯಿಂದ ಎಲ್ಲಾ ಐದು ಸ್ಥಾನಗಳಿಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೊದಲ ದಿನವೇ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಪ್ರಥಮ ಬಾರಿಗೆ ರಾಜ್ಯ ರೈತ ಸಂಘವು ಎಲ್ಲಾ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಪರಿಶಿಷ್ಟ ಪಂಗಡ ಅಭ್ಯರ್ಥಿಗೆ ಮೀಸಲಾಗಿರುವ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ.
ಎನ್‌ಡಿಎ ಬಣದಲ್ಲಿ ‘ಬಿ’ ತರಗತಿಯಿಂದ ಜೆಡಿಎಸ್ ಬೆಂಬಲಿತರಿಗೆ ಐದು ಹಾಗೂ ಬಿಜೆಪಿ ಬೆಂಬಲಿತರಿಗೆ ಮೂರು ಸ್ಥಾನಗಳಂತೆ ಹಂಚಿಕೆಯಾಗಿವೆ. ಹಾಗೆಯೇ ‘ಎ’ ತರಗತಿಯಿಂದ ಜೆಡಿಎಸ್ 2, ಬಿಜೆಪಿ 3 ಸ್ಥಾನ ಹಂಚಿಕೆ ಮಾಡಿಕೊಂಡಿವೆ. ಅ.24 ರಿಂದ(ಶುಕ್ರವಾರ) ತಾಲ್ಲೂಕಿನ ತೂಬಗೆರೆ ಹೋಬಳಿಯ ಸಾಧುಮಠದಲ್ಲಿ ಬೆಳಿಗ್ಗೆ 10 ಗಂಟೆಗೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಒಟ್ಟಾಗಿ ಚುನಾವಣಾ ಪ್ರಚಾರ ಪ್ರಾರಂಭಿಸಲಿದ್ದಾರೆ.
ಈ ಬಾರಿ ಟಿಎಪಿಎಂಸಿಎಸ್ ಚುನಾವಣಾ ಕಣ ಹಿಂದೆಂದಿಗಿಂತಲು ಹೆಚ್ಚು ರಂಗೇರಿದೆ. ತಾಲ್ಲೂಕಿನಲ್ಲಿ ಮುಂದಿನಗಳಲ್ಲಿ ಬರಲಿರುವ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಟಿಎಪಿಎಂಸಿಎಸ್ ಎನ್‌ಡಿಎ ಮೈತ್ರಿ ದಿಕ್ಸೂಚಿಯಾಗಲಿದೆ ಎನ್ನುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.