ADVERTISEMENT

ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ

ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 13:31 IST
Last Updated 5 ಅಕ್ಟೋಬರ್ 2019, 13:31 IST
ವಿಜಯಪುರದಲ್ಲಿ ಕಸಾಪ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು
ವಿಜಯಪುರದಲ್ಲಿ ಕಸಾಪ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು   

ವಿಜಯಪುರ: ಕಲಿಕೆ ಎಂಬುದು ನಾಲ್ಕು ಗೋಡೆಗಳ ಮಧ್ಯೆ ಹಾಗೂ ಪುಸ್ತಕಗಳಿಗೆ ಮಾತ್ರ ಸಿಮೀತವಾಗದೆ ಸ್ವಂತ ಕಲಿಕೆ ಮತ್ತು ಹೊಸ ಆವಿಷ್ಕಾರಗಳನ್ನು ಮಾಡಲು ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಹೇಳಿದರು.

ಇಲ್ಲಿನ ಗಾಂಧಿ ಚೌಕದ ಮಹಂತಿನಮಠದಲ್ಲಿ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ‘ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಸಂಪಾದನೆಗಾಗಿ ಶಿಕ್ಷಣ ಪಡೆಯುವುದು ಬೇಡ. ಇಂದು ಸರ್ಕಾರ ಶಿಕ್ಷಣ ನೀಡುವುದರ ಜತೆಗೆ ಸಮವಸ್ತ್ರ, ಪಠ್ಯಪುಸ್ತಕಗಳು, ವಿದ್ಯಾರ್ಥಿವೇತನ ಮುಂತಾದ ಸೌಲಭ್ಯ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅದರಂತೆಯೇ ಶಿಕ್ಷಕರೂ ಮೌಲ್ಯಾಧಾರಿತ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಬೆಳೆಸಲು ಶ್ರಮಿಸುವ ಅಗತ್ಯ ಇದೆ’ ಎಂದರು.

ADVERTISEMENT

‘ಉತ್ತಮ ಮೌಲ್ಯಗಳು, ಸಂಸ್ಕಾರ ಬೆಳೆಸುವ ಹೊಣೆಗಾರಿಕೆಯೂ ಶಿಕ್ಷಕರ ಮೇಲಿದೆ’ ಎಂದು ಹೇಳಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮಾತನಾಡಿ, ‘ಹಿಂದಿನ ಕಾಲದಲ್ಲಿ ಮಹಿಳೆಯರನ್ನು ಶಿಕ್ಷಣದಿಂದ ದೂರವಿಟ್ಟು ನಾಲ್ಕು ಗೋಡೆಗಳಿಗೆ ಸೀಮಿತ ಎಂದು ಭಾವಿಸಿ ಕಡೆಗಣಿಸಲಾಗುತ್ತಿತ್ತು’ ಎಂದರು.

‘ಆದರೆ ಇಂದಿನ ದಿನಗಳಲ್ಲಿ ಮಹಿಳೆಯರು ರಾಜಕೀಯ, ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪನ್ನು ಮೂಡಿಸುತ್ತಿದ್ದಾರೆ. ಇದಕ್ಕೆ ದೇಶದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರೇ ಕಾರಣ. ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಗೌರವಾನ್ವಿತ ಸ್ಥಾನಮಾನಗಳನ್ನು ಕಲ್ಪಿಸಿಕೊಡುವುದರಿಂದ ಸಮಾಜವನ್ನು ಮತ್ತಷ್ಟು ಉನ್ನತ ಮಟ್ಟಕ್ಕೇರಿಸುತ್ತಾರೆ’ ಎಂದರು.

ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಾಂತರಾಜ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಪಕರಾದ ಶಿಕ್ಷಕರು ನಿರಂತರವಾಗಿ ಅಧ್ಯಯನಶೀಲರಾಗಬೇಕು ಹಾಗೂ ಶಿಕ್ಷಕರು ನಿರಂತರ ಕಲಿಕೆ ಮತ್ತು ಕಲಿಸುವ ಮೂಲಕ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೃತ್ತಿಗಳಲ್ಲಿ ಅತ್ಯಂತ ಶ್ರೇಷ್ಠವಾದ ವೃತ್ತಿ ಶಿಕ್ಷಕ ವೃತ್ತಿ. ವಿದ್ಯಾರ್ಥಿಗಳ ನಡೆ, ನುಡಿ, ಆಚಾರ-ವಿಚಾರಗಳನ್ನು ತುಂಬ ಹತ್ತಿರದಿಂದ ಸೂಕ್ಷ್ಮವಾಗಿ ಗ್ರಹಿಸುವುದು ಶಿಕ್ಷಕರೇ. ತಾಯಿಯ ನಂತರ ಶಿಕ್ಷಕರು ಅತ್ಯಂತ ಪ್ರೀತಿಯಿಂದ ವಿದ್ಯಾರ್ಥಿಗೆ ವಿದ್ಯೆಯನ್ನು ಕಲಿಸುತ್ತಾರೆ ಎಂದರು.

ಎಂ.ವಿ.ನಾಯ್ಡು, ನರಸಿಂಹಪ್ಪ ಅವರ ತಂಡದಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ ಹಡಪದ್, ವಿ.ಎನ್. ರಮೇಶ್, ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ಎನ್. ರಾಜಗೋಪಾಲ್, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಭಗವಾನ್, ಚೌಡೇಗೌಡ, ಮುನಿನಾರಾಯಣಪ್ಪ, ಬಸವರಾಜೇಂದ್ರಪ್ಪ, ಪುನೀತಾ ನಟರಾಜ್, ಆರ್. ಮನಿರಾಜು, ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.