ADVERTISEMENT

ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕ್ರಮ : ಸಿಇಒ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 12:27 IST
Last Updated 23 ಆಗಸ್ಟ್ 2019, 12:27 IST
ಶಿಕ್ಷಕರ ಚಿಂತನ ಮಂಥನ ಸಭೆಯಲ್ಲಿ ಸಿಇಒ ಆರ್.ಲತಾ ಮಾತನಾಡಿದರು
ಶಿಕ್ಷಕರ ಚಿಂತನ ಮಂಥನ ಸಭೆಯಲ್ಲಿ ಸಿಇಒ ಆರ್.ಲತಾ ಮಾತನಾಡಿದರು   

ದೇವನಹಳ್ಳಿ: 2019–20ನೇ ಸಾಲಿನ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇಂದಿನಿಂದಲೇ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಸಿಇಒ ಆರ್.ಲತಾ ಶಿಕ್ಷಕರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಯೆಟ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಶಿಕ್ಷಕರ ಚಿಂತನ-ಮಂಥನ’ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇವನಹಳ್ಳಿ, ವಿಜಯಪುರ, ದೊಡ್ಡಬಳ್ಳಾಪುರ, ದೇವಲಾಪುರ ಹಾಗೂ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 10ನೇ ತರಗತಿಗೆ ಅತಿ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಐದು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬರುವ ಫಲಿತಾಂಶವೇ ಜಿಲ್ಲೆಯ ಉತ್ತಮ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇದಕ್ಕಾಗಿಯೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಈ ಶಾಲೆಗಳ ಉಪ ಪ್ರಾಂಶುಪಾಲರು ಹಾಗೂ ಸಹ ಶಿಕ್ಷಕರ ಚಿಂತನ-ಮಂಥನ ಸಭೆ ನಡೆಸಲಾಗುತ್ತಿದೆ. ಶೈಕ್ಷಣಿಕ ಸಾಲಿನ ಆರಂಭದಿಂದಲೇ ಎಸ್ ಎಸ್ಎಲ್‌ಸಿ ಮಕ್ಕಳ ಗುಣಾತ್ಮಕ ಕಲಿಕೆ, ಕ್ರಿಯಾಶೀಲತೆ, ಆತ್ಮವಿಶ್ವಾಸದ ಬಗ್ಗೆ ಗಮನ ನೀಡುವಂತೆ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ADVERTISEMENT

ಸಭೆಯಲ್ಲಿ ಶಿಕ್ಷಣ ತಜ್ಞ ಡಾ.ನಾಗರಾಜ್ ಪರೀಕ್ಷಾ ಫಲಿತಾಂಶ ಸುಧಾರಣಾ ಕ್ರಮಗಳನ್ನು ಶಿಕ್ಷಕರ ಮೂಲಕ ಮಾಹಿತಿ ಪಡೆದುಕೊಂಡರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಡಯೆಟ್‌ನ ಪ್ರಾಂಶುಪಾಲ ಉಮೇಶ್ ಶಿರಹಟ್ಟಿಮಠ್, ಶಿಕ್ಷಣಾಧಿಕಾರಿ ಹನುಮಂತಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪ ಪ್ರಾಂಶುಪಾಲರು, ಡಯೆಟ್‌ನ ಹಿರಿಯ ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಪ್ರೌಢಶಾಲೆ ಸಹ ಶಿಕ್ಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.