ADVERTISEMENT

ನಿಯಮ ಉಲ್ಲಂಘಿಸಿದ ಟೆಂಪೋಗಳು ವಶಕ್ಕೆ

ವಾಹನ ಚಾಲನೆಯಲ್ಲಿ ಪ್ರತಿಯೊಬ್ಬರು ಕಾನೂನು ಗೌರವಿಸುವುದು ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:46 IST
Last Updated 1 ಆಗಸ್ಟ್ 2019, 14:46 IST
ವಿಜಯಪುರ ಪೊಲೀಸರು ವಶಪಡಿಸಿಕೊಂಡಿರುವ ಟೆಂಪೋಗಳು
ವಿಜಯಪುರ ಪೊಲೀಸರು ವಶಪಡಿಸಿಕೊಂಡಿರುವ ಟೆಂಪೋಗಳು   

ವಿಜಯಪುರ: ಮಾನವನ ಪ್ರಾಣ ಮತ್ತು ಜೀವನ ಅಮೂಲ್ಯವಾಗಿದೆ. ಅದರ ರಕ್ಷಣೆ ಎಲ್ಲರ ಹೊಣೆಯೂ ಆಗಿದೆ. ಅತಿ ವೇಗ, ಗಡಿಬಿಡಿ ಮತ್ತು ಅತಿ ಆಸೆಗೆ ಮನುಷ್ಯ ಜೀವವು ಬಲಿಯಾಗದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್ ತಿಳಿಸಿದರು.

ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುತ್ತಿದ್ದ ಟೆಂಪೊಗಳು ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳು, ಟಾಟಾ ಏಸ್‌ಗಳನ್ನು ವಶಕ್ಕೆ ಪಡೆದುಕೊಂಡು ಅವರು ಮಾತನಾಡಿದರು.

ಸರಕು ಸಾಗಣೆಯ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈಗಾಗಲೇ ಎಲ್ಲ ಕಡೆಗಳಲ್ಲಿ ವ್ಯಾಪಕ ಪ್ರಚಾರ ಮಾಡಲಾಗಿದೆ. ವಾಹನ ಚಾಲನೆಯಲ್ಲಿ ಪ್ರತಿಯೊಬ್ಬರು ಕಾನೂನು ಗೌರವಿಸುವುದು ಅಗತ್ಯವಾಗಿದೆ. ಅದರಲ್ಲಿಯೂ ವಾಹನ ಚಾಲಕರು ದುಶ್ಚಟಗಳಿಂದ ದೂರ ಉಳಿಯುವುದರಿಂದ ಪ್ರಾಣ ಹಾನಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಗೂಡ್ಸ್ ವಾಹನಗಳಾದ ಲಾರಿ, ಮಿನಿ ಟ್ರಕ್ಸ್, ಟೆಂಪೋಗಳು, ಟಾಟಾ ಏಸ್‌ಗಳು ಸೇರಿದಂತೆ ಇನ್ನಿತರ ಸರಕು ಸಾಗಾಣಿಕಾ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ರಸ್ತೆ ನಿಯಮಗಳನ್ನು ಮೀರಿದಂತೆ ಆಗುತ್ತದೆ. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಗೂಡ್ಸ್ ವಾಹನಗಳ ಚಾಲಕರು ಮತ್ತು ಮಾಲೀಕರು ಅದರಲ್ಲಿ ಜನರನ್ನು ಸಾಗಾಟ ಮಾಡುವುದನ್ನು ನಿಲ್ಲಿಸುವುದರ ಮೂಲಕ ಕೋರ್ಟ್ ಆದೇಶಕ್ಕೆ ಗೌರವ ನೀಡಬೇಕಾಗಿದೆ ಎಂದರು.

ಸರಕು ಸಾಗಣೆ ವಾಹನದಲ್ಲಿ ಕೂಲಿಕಾರ್ಮಿಕರು ಹಾಗೂ ಜನರನ್ನು ಸಾಗಿಸುವುದು ಅಕ್ಷಮ್ಯ ಅಪರಾಧವಾಗಿದ್ದು, ಅಂತಹ ವಾಹನಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ವಾಹನ ಸವಾರರು ಜೀವ ರಕ್ಷಣೆ ಹಾಗೂ ಕುಟುಂಬ ಭದ್ರತೆ ಸಲುವಾಗಿ ನೀವು ಹೊರಡಬೇಕಾದ ಸ್ಥಳಕ್ಕೆ ಬೇಗ ಹೊರಟು ನಿಧಾನವಾಗಿ ವಾಹನ ಚಲಾಯಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಸಬ್‌ ಇನ್‌ಸ್ಪೆಕ್ಟರ್ ನರೇಶ್‌ ನಾಯಕ್ ಮಾತನಾಡಿ, ದ್ವಿಚಕ್ರ ವಾಹನಗಳ ಚಾಲಕರು ಪರವಾನಗಿ, ಇನ್ಸೂರೆನ್ಸ್, ಹೆಲ್ಮೆಟ್, ಸೀಟ್‌ ಬೆಲ್ಟ್ ಧರಿಸುವುದು, ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ ಮಾಡುವುದು, ಜನವಸತಿ ಪ್ರದೇಶಗಳಲ್ಲಿ ಅತಿಯಾದ ವೇಗವಾಗಿ ವಾಹನ ಚಾಲನೆ ಮಾಡುವುದು, ಮದ್ಯಪಾನ ಮಾಡಿ ಚಾಲನೆ ಮಾಡಿದಲ್ಲಿ ಕ್ರಮ ಜರುಗಿಸಲಾಗುವುದು.

ಆಸ್ಪತ್ರೆಗಳು, ನ್ಯಾಯಾಲಯ, ಸರ್ಕಾರಿ ಶಾಲೆಗಳು ಸೇರಿದಂತೆ ನಿಷೇಧಿತ ಪ್ರದೇಶಗಳಲ್ಲಿ ಶಬ್ದ ಮಾಡಿಕೊಂಡು ವಾಹನಗಳನ್ನು ಚಾಲನೆ ಮಾಡುವುದು ಕಂಡು ಬಂದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಮದ್ಯ ಸೇವಿಸಿ ವಾಹನ ಚಲಾಯಿಸಿದಲ್ಲಿ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕೆಲ ಮುಖಂಡರು ಮನವಿ ಮಾಡಿದಂತೆ, ‘ನಾವು ಸಿಮೆಂಟ್ ಕಾಂಕ್ರೀಟ್ ಹಾಕಲಿಕ್ಕೆ ಹೋಗುವವರು, ಕೂಲಿ ಕಾರ್ಮಿಕರಿಗಾಗಿ ಪ್ರತ್ಯೇಕ ವಾಹನ ಮಾಡಿಕೊಂಡು ಜೋಪಾನವಾಗಿ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಬರುತ್ತೇವೆ. ಜನರು ಪ್ರಯಾಣ ಮಾಡುವಂತಹ ಸೀಟ್ ವಾಹನಗಳನ್ನು ಮಾಡಿಕೊಂಡು ಕಾರ್ಮಿಕರನ್ನು ಕರೆದುಕೊಂಡು ಹೋಗಲಿಕ್ಕೆ ಸಾಧ್ಯವೇ. ಅಷ್ಟೊಂದು ಬಂಡವಾಳ ನಮಗೆ ಎಲ್ಲಿಂದ ಬರುತ್ತೆ. ಕನಿಷ್ಠ ಸುತ್ತಮುತ್ತಲಿನ 5 ಕೀ.ಮೀ. ವ್ಯಾಪ್ತಿಯಲ್ಲಿ ಹೋಗುವವರಿಗೆ ಅವಕಾಶ ಮಾಡಿಕೊಡಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.