ADVERTISEMENT

ದೇವನಹಳ್ಳಿ: ಆಸ್ತಿಗಾಗಿ ತಂದೆಯನ್ನೇ ಹೊರಹಾಕಿದ ಮಕ್ಕಳು

ಕೋರ್ಟ್‌ ಆದೇಶಕ್ಕೂ ತಲೆಬಾಗದ ಕುಟುಂಬ: ಆಸ್ತಿ ಮರಳಿಸಲು ಅಧಿಕಾರಿಗಳು ಹರಸಾಹಸ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 23:30 IST
Last Updated 1 ಜೂನ್ 2023, 23:30 IST
ದೇವನಹಳ್ಳಿಯ ಬೂದಿಗೆರೆ ಪಂಚಾಯಿತಿ ಎದುರು ಕೋರ್ಟ್‌ ಆದೇಶ ಪಾಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಪಾಪಣ್ಣ
ದೇವನಹಳ್ಳಿಯ ಬೂದಿಗೆರೆ ಪಂಚಾಯಿತಿ ಎದುರು ಕೋರ್ಟ್‌ ಆದೇಶ ಪಾಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಪಾಪಣ್ಣ   

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದಲ್ಲಿ ಆಸ್ತಿಗಾಗಿ ಜನ್ಮ ನೀಡಿದ ತಂದೆ-ತಾಯಿಯನ್ನೇ ಮಕ್ಕಳು ಬೀದಿ ಪಾಲು ಮಾಡಿದ್ದಾರೆ.

ಇಳಿ ವಯಸ್ಸಿನಲ್ಲಿ ಪೋಷಕರಿಗೆ ಒಂದೊತ್ತು ಅನ್ನ ನೀಡಲು ಹಿಂದೇಟು ಹಾಕಿದ್ದ ಕಾರಣಕ್ಕೆ ಸಂತ್ರಸ್ತ ಪಾಪಣ್ಣ ಅವರು ತಾನು ಸಂಪಾದನೆ ಮಾಡಿದ ಆಸ್ತಿಯನ್ನು ಕೋರ್ಟ್ ಮೆಟ್ಟಿಲೇರಿ ಮರಳಿ ಪಡೆದರೂ ಆದೇಶವನ್ನು ಸಕಾಲದಲ್ಲಿ ಜಾರಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಹಾಗಾಗಿ ಬೂದಿಗೆರೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಹಿರಿಯ ನಾಗರಿಕ ಸಂತ್ರಸ್ತ ಪಾಪಣ್ಣ ಒಂಬಟ್ಟಿಯಾಗಿ ಗುರುವಾರ ಪ್ರತಿಭಟನೆ ನಡೆಸಿದರು. ಉಪವಿಭಾಗಾಧಿಕಾರಿಗಳ ಆದೇಶವಾಗಿ ಒಂದು ವರ್ಷವಾದರೂ ಜಾರಿ ಮಾಡಲು ಗ್ರಾಪಂ ಅಧಿಕಾರಿಗಳು, ಕಂದಾಯ ಇಲಾಖೆ, ಪೊಲೀಸರು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಜೀವನ ನಿರ್ವಹಣೆಗೆ ಆಸ್ತಿ ಮರುಕಳಿಸುವಂತೆ ಒತ್ತಾಯಿಸಿದರು.

ADVERTISEMENT

ಈ ಕುರಿತು ಮಾತನಾಡಿದ ಉಪತಹಶೀಲ್ದಾರ್‌ ಸುರೇಶ್, ‘ಈಗಾಗಲೇ ನ್ಯಾಯಾಲಯದ ಆದೇಶದಂತೆ ಪಾಪಣ್ಣರವರ ಸ್ವತ್ತು ಬಿಡಿಸಿಕೊಡಲು ಈ ಹಿಂದೆ ಯತ್ನಿಸಲಾಗಿತ್ತು. ಅವರ ಮಕ್ಕಳು ಅಂಗಡಿಗಳಿಗೆ ಬೀಗ ಜಡಿದು ಹೋಗಿದ್ದರು. ಈ ಕುರಿತು ಚನ್ನರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಮ್ಮೆ ಮೇಲಾಧಿಕಾರಿಗಳಿಂದ ನಿರ್ದೇಶನದ ಸಲುವಾಗಿ ಅವರ ಆಸ್ತಿಯನ್ನು ಮರುಕಳಿಸಲು ಕಾರ್ಯಾಚರಣೆ ಮಾಡಿದ್ದೇವೆ’ ಎಂದರು.

ಪಾಪಣ್ಣರವರ ಮಕ್ಕಳಿಗೆ ಈಗಾಗಲೇ ದೂರವಾಣಿಯ ಮೂಲಕ ತಿಳಿಸಿದ್ದೇವೆ. ನೋಟಿಸ್‌ ನೀಡಿದ್ದರೂ ಅದಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ, ಇಷ್ಟಾದರೂ ಮನೆ, ಅಂಗಡಿಯ ಒಳಗೆ ಇರುವ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ. ನ್ಯಾಯಾಲಯದ ಆದೇಶದ ಅನ್ವಯ ಕರ್ತವ್ಯ ನಿರ್ವಹಣೆ ಮಾಡಿದ್ದೇವೆ. ಅವರಿಗೆ ಇನ್ನೆರಡು ದಿನ ಸಮಯವನ್ನು ನೀಡುತ್ತೇವೆ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಿ, ಪೂರ್ಣ ಪ್ರಮಾಣದಲ್ಲಿ ಪಾಪಣ್ಣರಿಗೆ ಸ್ವತ್ತುಗಳನ್ನು ಒದಗಿಸುತ್ತೇವೆ ಎಂದು ಬೂದಿಗೆರೆ ಗ್ರಾಪಂ ಪಿಡಿಓ ನರ್ಮದಾ ತಿಳಿಸಿದರು.

ಏನಿದು ಪ್ರಕರಣ: ಸೂಕ್ತ ಸಮಯದಲ್ಲಿ ಆಸ್ತಿ ಭಾಗ ಮಾಡಿಲ್ಲ ಎಂದು ಮಕ್ಕಳು ತಂದೆಯನ್ನೇ ಹೊರ ಹಾಕಿದ್ದು, ಇದನ್ನು ವಿರೋಧಿಸಿ ಹಿರಿಯ ಪಾಪಣ್ಣ, ದೊಡ್ಡಬಳ್ಳಾಪುರದ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಮಕ್ಕಳು ಕಬ್ಜಾ ಮಾಡಿಕೊಂಡಿದ್ದ ಆಸ್ತಿಯನ್ನು ಮರಳಿ ಪಡೆಯಲು ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಮನೆ, ಅಂಗಡಿ ಸ್ವಲ್ಪ ಭೂಮಿ ಅವರಿಗೆ ಬಿಡಿಸಿಕೊಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಒಂದು ವರ್ಷದ ಹಿಂದೆಯೇ ನಿರ್ದೇಶನ ನೀಡಿದೆ. 

ಹಿರಿಯ ಜೀವನ ಅಳಲೇನು?: ಮಕ್ಕಳ ವಿರುದ್ಧವೇ ಪ್ರಕರಣ ಹೂಡಿ ತನ್ನ ಸ್ವಯಾರ್ಜಿತ ಸ್ವತ್ತನ್ನು ಪಡೆಯಲು ಹೋರಾಟ ಮಾಡುತ್ತಿರುವ ಪಾಪಣ್ಣ, ‘ನನಗೆ ಒಟ್ಟು ಎಂಟು ಜನ ಮಕ್ಕಳಿದ್ದಾರೆ. ಸ್ವಂತ ದುಡಿಮೆಯಿಂದಲೇ ಆಸ್ತಿ ಸಂಪಾದನೆ ಮಾಡಿದ್ದೇನೆ. ಇಳಿ ವಯಸ್ಸಿನಲ್ಲಿ ಆಸ್ತಿಗಾಗಿ ಮಕ್ಕಳು ನನ್ನನ್ನು ರಸ್ತೆಗೆ ದೂಡಿದ್ದಾರೆ. ಹಾಗಾಗಿ ಮಕ್ಕಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಆದೇಶ ಮಾಡಿಸಿದ್ದೇನೆ. ಒಂದು ವರ್ಷ ಕಳೆದರೂ ಇಂದಿಗೂ, ಅಧಿಕಾರಿಗಳ ಅಸಡ್ಡೆತನದಿಂದ ಪೂರ್ಣ ಪ್ರಮಾಣದಲ್ಲಿ ಸ್ವತ್ತು ಸುಪರ್ದಿಗೆ ಬಂದಿಲ್ಲ, ಈಗ ಇನ್ನೆರೆಡು ದಿನ ಸಮಯ ನೀಡಿದ್ದಾರೆ ಎಂದು ಅಳಲು ತೊಡಿಕೊಂಡರು.

ಬೂದಿಗೆರೆ ಗ್ರಾಮದಲ್ಲಿರುವ ಅಂಗಡಿಗಳನ್ನು ಖಾಲಿ ಮಾಡಿಸುವ ಸಲುವಾಗಿ ಜಮಾವಣೆಗೊಂಡಿದ್ದ ಕಂದಾಯ ಗ್ರಾಪಂ ಪೊಲೀಸ್‌ ಇಲಾಖೆ ಸಿಬ್ಬಂದಿ

ಸಂಘಟನೆಗಳಿಂದ ಕರ್ತವ್ಯಕ್ಕೆ ಅಡ್ಡಿ! ಈ ಹಿಂದೆ ಕೋರ್ಟ್‌ ಆದೇಶ ಜಾರಿ ಮಾಡಲು ಹೋದಾಗ ಎರಡು ದಿನ ಸಮಯ ಕೇಳಿ ಪಾಪಣ್ಣರ ಗಂಡು ಮಕ್ಕಳು ಮನೆ ಅಂಗಡಿಗಳನ್ನು ವಶಕ್ಕೆ ಪಡೆದು ಬೀಗ ಹಾಕಿದ್ದರು. ಮಹಿಳಾ ಸಂಘಟನೆಯ ಸೋಗಿನಲ್ಲಿ ಬಂದಿದ್ದ ಲಕ್ಷ್ಮೀ ಎಂಬುವವರು ಅಧಿಕಾರಿಗಳು ಹಾಕಿ ಹೋಗಿದ್ದ ಬೀಗವನ್ನು ಹೊಡೆದು ಹಾಕಿ ಮನೆ ಅಂಗಡಿಗಳನ್ನು ಪಾಪಣ್ಣರ ಗಂಡು ಮಕ್ಕಳಿಗೆ ನೀಡಿದ್ದರು. ಈ ಕುರಿತು ಈಗಾಗಲೇ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಗುರುವಾರ ನಡೆದ ಕಾರ್ಯಾಚರಣೆಯಲ್ಲಿಯೂ ಎರಡು ದಿನ ಸಮಯ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.