ADVERTISEMENT

ದೇವನಹಳ್ಳಿ: ಕೋವಿಡ್‌ ತಡೆಯೇ ಮೊದಲ ಆದ್ಯತೆ

ಮಾರ್ಗಸೂಚಿ ಪಾಲನೆಗೆ ಸಂಸದ ಬಿ.ಎನ್‌. ಬಚ್ಚೇಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:02 IST
Last Updated 11 ಜನವರಿ 2022, 7:02 IST
ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಬಿ.ಎನ್‌. ಬಚ್ಚೇಗೌಡ ಮಾತನಾಡಿದರು
ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಬಿ.ಎನ್‌. ಬಚ್ಚೇಗೌಡ ಮಾತನಾಡಿದರು   

ದೇವನಹಳ್ಳಿ: ‘ಕೋವಿಡ್‌ ಮೂರನೇ ಅಲೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ಸೋಂಕು ನಿಯಂತ್ರಣವೇ ನಮ್ಮ ಮೊದಲ ಆದ್ಯತೆ. ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣವಾಗಿ ಸಂಸದರ ನಿಧಿಯನ್ನು ಖರ್ಚು ಮಾಡಲಾಗಿದೆ’ ಎಂದು ಸಂಸದ ಬಿ.ಎನ್‌. ಬಚ್ಚೇಗೌಡ ತಿಳಿಸಿದರು.

ಬೀರಸಂದ್ರ ಗ್ರಾಮದಲ್ಲಿರುವ ಜಿಲ್ಲಾಡಳಿತ ಭವನದದ ಜಿಲ್ಲಾ ಪಂಚಾ ಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ 2021-22ನೇ ಸಾಲಿನ ದಿಶಾ ಪ್ರಗತಿ ಪರಿಶೀಲನಾ ಸಭೆ ಮತ್ತು ವಿವಿಧ ಕಾಮಗಾರಿಗಳ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿ ಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಲದಲ್ಲಿ ಪ್ರತಿಯೊಬ್ಬ ಪ್ರಯಾಣಿಕರ ಮೇಲೂ ಅಧಿಕಾರಿಗಳು ನಿಗಾವಹಿಸಬೇಕು. ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲಿಯೇ ಲಸಿಕಾ ನೀಡುವಲ್ಲಿ 12ನೇ ಸ್ಥಾನದಲ್ಲಿದೆ. ಜಿಲ್ಲೆಯಾದ್ಯಂತ ಬೂಸ್ಟರ್‌ ಡೋಸ್‌ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯವೂ ಚಾಲ್ತಿಯಲ್ಲಿದೆ. ವೇಗವಾಗಿ ಲಸಿಕೆ ನೀಡುವ ಮೂಲಕ ಶ್ರೀಸಾಮಾನ್ಯರ ಆರೋಗ್ಯವನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಮಾಸ್ಕ್‌ ವಿತರಣೆ, ಸ್ಯಾನಿಟೈಜೇಷನ್‌, ಚರಂಡಿ ಸ್ವಚ್ಛತೆ, ಘನತ್ಯಾಜ್ಯ ವಿಲೇವಾರಿಗೆ ವಾಹನ ಖರೀದಿ ಸೇರಿದಂತೆ ಕೋವಿಡ್‌ ನಿಯಂತ್ರಣಕ್ಕಾಗಿ 15ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ರೈತರಿಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಜಿಲ್ಲೆಯಾದ್ಯಂತ ನೀಲಗಿರಿ ಮರಗಳನ್ನು ತೆರವುಗೊಳಿಸಬೇಕು. ಅದಕ್ಕೆ ಪರ್ಯಾಯವಾಗಿ ಮಹಾಗನಿ, ಹೆಬ್ಬೇವು, ತೆಂಗು, ರಕ್ತಚಂದನ ಬೆಳೆಯುವಂತೆ ಪ್ರೋತ್ಸಾ ಹಿಸಿ ಆರ್ಥಿಕವಾಗಿ ರೈತರನ್ನು ಸಶಕ್ತಗೊಳಿಸಬೇಕು ಎಂದುಹೇಳಿದರು.

ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು. ಕೆರೆ ಅಂಗಳದಲ್ಲಿ ಜಾಲಿ ಮರಗಳ ಹರಾಜು ಮಾಡಿ ಅದರಿಂದ ಬರುವ ಆದಾಯವನ್ನು ಸರ್ಕಾರಕ್ಕೆ ನೀಡಬೇಕು ಎಂದು ಸೂಚಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆಗೆ ಬಹಳ ಬೇಡಿಕೆ ಇದೆ. ಜಿಲ್ಲೆಯಲ್ಲಿ ರೇಷ್ಮೆ ಬೆಳೆಗೆ ಮತ್ತಷ್ಟು ಉತ್ತೇಜನ ನೀಡಿ ಕನಿಷ್ಠ 500 ಎಕರೆಗೆ ವಿಸ್ತರಣೆ ಮಾಡಬೇಕು. ಅಕಾಲಿಕ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ನೀಡುವಂತೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬಳಕೆಯಾಗದ ಅನುದಾನ:ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ( ಪಿಎಂಕೆಎಸ್‌ವೈ) ಅಡಿಯಲ್ಲಿ ಹೊಸಕೋಟೆ ತಾಲ್ಲೂಕಿಗೆ 2021-22ನೇ ಸಾಲಿನಲ್ಲಿ ಒಟ್ಟು ₹ 15.45 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ಒಂದು ನಯಾಪೈಸೆಯನ್ನೂ ವೆಚ್ಚ ಮಾಡದೆ ಇರುವುದು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಗೆ ಸಾಕ್ಷಿಯಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ರೇವಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್, ಜಿ.ಪಂ. ಉಪ ಕಾರ್ಯದರ್ಶಿ ಸಿ.ಎಂ. ಮುನಿಕೃಷ್ಣಪ್ಪ, ಮುಖ್ಯ ಯೋಜನಾಧಿಕಾರಿ ನರಸಿಂಹ ಎಂ.ಆರ್., ಮುಖ್ಯ ಲೆಕ್ಕಾಧಿಕಾರಿ ರಮೇಶರೆಡ್ಡಿ, ಯೋಜನಾ ನಿರ್ದೇಶಕ ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.