ADVERTISEMENT

ಭಾರಿ ಮಳೆಗೆ ದಿಕ್ಕೆಟ್ಟ ದೇವನಹಳ್ಳಿ ಜನತೆ

ಆಂಜನೇಯ ಸ್ವಾಮಿಗೆ ಜಲ ದಿಗ್ಬಂಧನ l ಬಹುತೇಕ ಕೆರೆಗಳು ಭರ್ತಿl ಹೂವಿನ ತೋಟ ಜಲಾವೃತ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 5:26 IST
Last Updated 31 ಆಗಸ್ಟ್ 2022, 5:26 IST
ದೇವನಹಳ್ಳಿಯ ಚಿಕ್ಕಕೆರೆ ಕೋಡಿ ನೀರಿನ ರಭಸ ತಡೆಯಲು ಸಿಮೆಂಟ್‌ ಪೈಪ್‌ ಅಳವಡಿಸಿ ರಸ್ತೆ ಸಂಪರ್ಕವನ್ನು ಕಡಿತಗೊಳಿಸಿರುವುದು
ದೇವನಹಳ್ಳಿಯ ಚಿಕ್ಕಕೆರೆ ಕೋಡಿ ನೀರಿನ ರಭಸ ತಡೆಯಲು ಸಿಮೆಂಟ್‌ ಪೈಪ್‌ ಅಳವಡಿಸಿ ರಸ್ತೆ ಸಂಪರ್ಕವನ್ನು ಕಡಿತಗೊಳಿಸಿರುವುದು   

ದೇವನಹಳ್ಳಿ: ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಏಕಕಾಲದಲ್ಲಿ ಹಲವು ಕೆರೆಗಳು ಭರ್ತಿಯಾಗಿವೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಕೆರೆಗಳು ಭರ್ತಿಯಾಗಿ ಕೋಡಿ ಹೋದ ದೃಶ್ಯಗಳು ಕಂಡುಬಂದವು. ಕಳೆದ ಒಂದು ವರ್ಷದಿಂದ ಸುರಿಯುತ್ತಿದ್ದ ಮಳೆಯಿಂದ ಕೆಲ ಕೆರೆಗಳು ಭರ್ತಿಯಾಗಿದ್ದವು. ಆದರೆ, ಒಂದೇ ರಾತ್ರಿ ಸುರಿದ ಭಾರಿ ಮಳೆಗೆ ಎಲ್ಲಾ ಕೆರೆಗಳು ಭರ್ತಿಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಮಳೆ ಅಬ್ಬರಕ್ಕೆ ಹಲವಾರು ಗ್ರಾಮದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪಟ್ಟಣದಲ್ಲಿನ ಮುಖ್ಯರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಪಕ್ಕದ ಮೋರಿ ತುಂಬಿ ರಸ್ತೆ ಮೇಲೆಲ್ಲಾ ಮಳೆ ನೀರು ಹರಿಯುತ್ತಿದ್ದು, ವಾಹನ ಸವಾರರು ಸಂಚಾರ ಮಾಡಲು ಸಾಧ್ಯವಾಗದೆ ಪರದಾಡುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು.

ADVERTISEMENT

ಬೆಂಗಳೂರಿನ ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರ ಕೆಂಪೇಗೌಡ ವೃತ್ತದಲ್ಲಿ ರಾತ್ರಿ ಇಡೀ ಕೆರೆಯ ವಾತಾವರಣ ನಿರ್ಮಾಣವಾಗಿತ್ತು. ಕಾರುಗಳು, ದ್ವಿಚಕ್ರವಾಹನಗಳು ನೀರಿನಲ್ಲಿ ತೇಲಿ ಬರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಇನ್ನೂ ರಾಜಕಾಲುವೆಗಳಲ್ಲಿ ಹೂಳೆತ್ತಲು ಸ್ಥಳೀಯ ಆಡಳಿತ ವಿಫಲವಾಗಿರುವ ಹಿನ್ನೆಲೆಯಲ್ಲಿ ಕಸದ ಸಮೇತ ಕೆರೆಯ ಕೋಡಿ ನೀರು ಹೆದ್ದಾರಿಯನ್ನು ಆವರಿಸಿಕೊಂಡಿತ್ತು. ಪಟ್ಟಣದ ಪರ್ವತ ಪುರದಲ್ಲಿ ಸುಮಾರು 100 ವರ್ಷದ ಅರಳಿ ಮರ ಮಳೆಯ ಆರ್ಭಟಕ್ಕೆ ಧರೆಗುರುಳಿದೆ. ಇದರ ಪರಿಣಾಮ 7ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಪಕ್ಕದ ಮನೆಗಳ ಮೇಲೆ ಬಿದ್ದು ಜಖಂಗೊಂಡಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತಾರು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಹೆದ್ದಾರಿಗೆ ಹೊಂದಿಕೊಂಡಿರುವ ಹಿರಾ ನಂದಾನಿ ಅಪಾರ್ಟ್‌ಮೆಂಟ್‌ ರಸ್ತೆಗಳಲ್ಲಿ ನುಗ್ಗಿರುವ ಕೆರೆ ನೀರು ಸಂಚಾರಕ್ಕೆ ತಡೆ ನೀಡಿತು. ಬೈಚಾಪುರ, ಅಣ್ಣೇಶ್ವರ ಗ್ರಾಮದಲ್ಲಿ ರೈತರು ಬೆಳೆದಿರುವ ಹೂವಿನ ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ.

ಕೋಟೆ ಪಕ್ಕದಲ್ಲಿರುವ ಚಿಕ್ಕಕೆರೆ ಆಂಜನೇಯ ಸ್ವಾಮಿ ದೇಗುಲಕ್ಕೆ ನುಗ್ಗಿರುವ ನೀರಿನಿಂದ ಜಲದಿಗ್ಬಂಧನ ಏರ್ಪಟ್ಟಿದ್ದು, ಭಕ್ತಾದಿಗಳು ನೀರಿನಲ್ಲಿಯೇ ತೆರಳಿ ಪೂಜೆ ಸಲ್ಲಿಸಿದರು. ಐವಿಸಿ ರಸ್ತೆಯ ರೈಲ್ವೆ ಅಂಡರ್ ಪಾಸ್‌ನಲ್ಲಿ ಶಾಲಾ ವಾಹನವೊಂದು ಕೆಟ್ಟು ನಿಂತು ಅಗ್ನಿಶಾಮಕ ಸಿಬ್ಬಂದಿಯ ನೆರವಿನೊಂದಿಗೆ ತೆರವುಗೊಳಿಸಲಾಯಿತು.

ಡಾಬಗೇಟ್‌ ಐವಿಸಿ ರಸ್ತೆ, ಯರ್ತಿಗಾನಹಳ್ಳಿ, ಅಮಾನಿಕೆರೆ, ಅಕ್ಕುಪೇಟೆ, ಬುಳ್ಳಹಳ್ಳಿ ರೈಲ್ವೆ ಅಂಡರ್‌ ಪಾಸ್‌ಗಳಲ್ಲಿ 5 ರಿಂದ 10 ಅಡಿಯಷ್ಟು ನೀರು ನಿಂತಿದೆ. ಗ್ರಾಮಗಳಿಗೆ ಜನ ಹೋಗಿಬರಲಾಗದೆ ಹತ್ತಾರು ಕಿ.ಮೀ ಸುತ್ತಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಕೆರೆ ಕೋಡಿಯ ನೀರಿನ ರಭಸವನ್ನು ಕಡಿಮೆ ಮಾಡಲು ಪುರಸಭೆಯಿಂದ ಸಿಮೆಂಟ್‌ನ ಬೃಹತ್‌ ಗಾತ್ರದ ಪೈಪ್‌ ಅಳವಡಿಸಿ ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಯಿತು. ಇದರ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಬೂದಿಗೆರೆ ಕೆರೆಯು ತುಂಬಿದೆ. 30ಕ್ಕೂ ಮನೆಗಳಿಗೆ ನೀರು ನುಗ್ಗಿದ್ದು ಮಲಗಲಾಗದೆ ರಾತ್ರಿ ಇಡೀ ವಯೋವೃದ್ಧರು, ಮಕ್ಕಳು ಜಾಗರಣೆ ಮಾಡಿದರು. ನೀರನ್ನು ಹೊರಹಾಕಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಕೋಡಿ ಹೋದ ಪ್ರಮುಖ ಕೆರೆಗಳು: ದೇವನಹಳ್ಳಿ ಪಟ್ಟಣದ ಕೋಟೆ ಹೊರಭಾಗದ ಚಿಕ್ಕಕರೆ, ದೊಡ್ಡಬಳ್ಳಾಪುರ ರಸ್ತೆಯ ದೊಡ್ಡಕರೆ, ಸಣ್ಣೆ ಅಮಾನಿಕರೆ, ಬಂಡೆ ಕೆರೆ, ದೊಡ್ಡಸಣ್ಣೆ ಕೆರೆ, ಬೆಟ್ಟಕೊಟೆ ಕೆರೆ, ಕನ್ನಮಂಗಲ ಕೆರೆ ಭರ್ತಿಯಾಗಿ ಕೋಡಿ ಹೋಗುತ್ತಿವೆ. ಈ ಕೆರೆಗಳು ಕಳೆದ ಮುಂಗಾರಿನಲ್ಲಿಯೂ ಕೋಡಿ ಹೋಗಿದ್ದವು. ಸುಮಾರು 20 ವರ್ಷದ ಬಳಿಕ ಒಂದು ವರ್ಷದಲ್ಲಿ ಮೂರು ಬಾರಿ ಕೋಡಿ ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.