ADVERTISEMENT

ಚನ್ನರಾಯಸ್ವಾಮಿ ಬೆಟ್ಟದಲ್ಲಿ ಜಲಲ ಜಲಧಾರೆ

ನಟರಾಜ ನಾಗಸಂದ್ರ
Published 7 ಅಕ್ಟೋಬರ್ 2021, 5:12 IST
Last Updated 7 ಅಕ್ಟೋಬರ್ 2021, 5:12 IST
ಚನ್ನರಾಯಸ್ವಾಮಿ ಬೆಟ್ಟದ ಬಂಡೆಗಳ ಬಳಿ ಹರಿಯುವ ಝರಿಗಳು
ಚನ್ನರಾಯಸ್ವಾಮಿ ಬೆಟ್ಟದ ಬಂಡೆಗಳ ಬಳಿ ಹರಿಯುವ ಝರಿಗಳು   

ದೊಡ್ಡಬಳ್ಳಾಪುರ:ಪಂಚಗಿರಿ ಶ್ರೇಣಿಯಲ್ಲಿಯೇ ಜಲಪಾತಗಳನ್ನು ಹೊಂದಿರುವ ಏಕೈಕ ಬೆಟ್ಟ ಎನ್ನುವ ಖ್ಯಾತಿಗೆ ಚನ್ನರಾಯಸ್ವಾಮಿ ಬೆಟ್ಟ ಪಾತ್ರವಾಗಿದೆ.

ಪ್ರತಿವರ್ಷ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಇಲ್ಲಿ ಜಲಪಾತಗಳು ಧುಮ್ಮಿಕ್ಕಲು ಆರಂಭವಾಗುತ್ತವೆ. ಮಳೆ ನಿಲ್ಲುವವರೆಗೂ ಅಂದರೆ ಡಿಸೆಂಬರ್‌ ಕೊನೆಯವರೆಗೂ ಜಲಪಾತದಲ್ಲಿ ನೀರು ಹರಿಯುತ್ತಲೇ ಇರುತ್ತದೆ. ನಂದಿಬೆಟ್ಟಕ್ಕೆ ಅಂಟಿಕೊಂಡೇ ಇರುವ ಚನ್ನರಾಯಸ್ವಾಮಿ ಬೆಟ್ಟದಲ್ಲಿನ ಏಳೆಮ್ಮೆ ದೊಣೆಯ ಮೂಲಕ ಬೆಟ್ಟದ ಮೇಲಿನಿಂದ ಬರುವ ನೀರು ಹಾಲಿನಂತೆ ಬೃಹತ್‌ ಬಂಡೆಯ ಮೂಲಕ ಬರುವುದನ್ನು ನೋಡಲು ಕಣ್ಣುಗಳಿಗೆ ಹಬ್ಬ ಉಂಟು ಮಾಡುತ್ತದೆ.

ಬಂಡೆ ಮೇಲಿನಿಂದ ಹರಿದು ಬರುವ ನೀರಿನಲ್ಲಿ ಆಟವಾಡಲು ಹೋಗಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅನಾಹುತಗಳು ನಡೆದ ನಂತರ ಎಚ್ಚೆತ್ತಿರುವ ಅರಣ್ಯ ಇಲಾಖೆಯು ಮಳೆಗಾಲದಲ್ಲಿ ಬೆಟ್ಟಕ್ಕೆ ಚಾರಣಿಗರು ಹೋಗದಂತೆ ತಡೆಯಲು ಸಿಬ್ಬಂದಿಯನ್ನು ನೇಮಿಸಿದೆ.

ADVERTISEMENT

ಬೆಂಗಳೂರು ನಗರ ಸೇರಿದಂತೆ ಬೆಟ್ಟದ ಸುತ್ತಲಿನ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವಾರು ತಾಲ್ಲೂಕುಗಳಿಂದಲೂ ಜಲಪಾತ ನೋಡಲು ಜನರು ಬರುತ್ತಾರೆ. ಅದರಲ್ಲೂ ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಈ ಭಾಗದಲ್ಲಿ ಹೆಚ್ಚಾಗಿ ಮಳೆಯಾಗುವುದರಿಂದ ಜಲಪಾತಗಳು ಮೈದುಂಬಿ ಹರಿಯುತ್ತವೆ.

ಚನ್ನರಾಯಸ್ವಾಮಿ ಬೆಟ್ಟದಿಂದ ಮಳೆಗಾಲದಲ್ಲಿ ಬರುವ ನೀರು ಚಿಕ್ಕರಾಯಪ್ಪನಹಳ್ಳಿ ಕೆರೆಗೆ ಬಂದು ಸೇರಿ ಮುಂದೆ ಹರಿದು ಹೋಗುತ್ತದೆ. ಈ ಕೆರೆಯ ಏರಿ ಎತ್ತರಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡಲಾಗುವುದು. ಬಳಿಕ ಮಳೆಕೋಟೆ, ಹೆಗ್ಗಡಿಹಳ್ಳಿ ಸೇರಿದಂತೆ ಈ ಭಾಗದ ಮೂರು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸುವುದಾಗಿ ಎರಡು ವರ್ಷಗಳ ಹಿಂದೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದ್ದರು. ಆದರೆ ಇದುವರೆಗೂ ನೀರಿನ ಲಭ್ಯತೆ ಸೇರಿದಂತೆ ಇತರೆ ಸಾಧ್ಯತೆ ಬಗ್ಗೆ ಸರ್ವೆ ಸಹ ನಡೆಸಿಲ್ಲ.

ಕುಡಿಯುವ ನೀರಿನ ಯೋಜನೆ ಜಾರಿಗೆ ಬಂದರೆ ಪ್ರತಿವರ್ಷವೂ ಈ ಭಾಗದ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು ತಪ್ಪಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಸೂಚನಾ ಫಲಕ ಅಳವಡಿಸಿ: ಜಲಪಾತ ಸಮೀಪ ಅಪಾಯದ ಸ್ಥಳಗಳಲ್ಲಿ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಬೇಕು. ಮಳೆಗಾಲದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡುವ ಮೂಲಕ ಅನಾಹುತ ನಡೆಯದಂತೆ ತಡೆಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹ.

‘ಬಯಲು ಸೀಮೆಯ ಜನರಿಗೆ ಜಲಪಾತ ನೋಡುವುದೆಂದರೆ ಎಲ್ಲರಿಗೂ ಖುಷಿಯೇ. ಹೀಗಾಗಿ ಯಾರನ್ನು ಸಹ ಬೆಟ್ಟಕ್ಕೆ ಬರದಂತೆ ತಡೆಯುವುದು ಕಷ್ಟ. ಹೀಗಾಗಿ ಅರಣ್ಯ ಇಲಾಖೆಯಿಂದ ಶುಲ್ಕ ನಿಗದಿಪಡಿಸಿ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಬೆಟ್ಟದ ಸುತ್ತಲೂ ತಂತಿಬೇಲಿ ಅಳವಡಿಸಿ ಒಂದು ಭಾಗದ ಮೂಲಕ ಮಾತ್ರ ಜಲಪಾತ ವೀಕ್ಷಣೆಗೆ ಬೆಟ್ಟಕ್ಕೆ ಹೋಗಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ದೊಡ್ಡರಾಯಪ್ಪನಹಳ್ಳಿಯ ರಾಜಣ್ಣ.

ಬೆಟ್ಟಕ್ಕೆ ಹೋಗುವವರನ್ನು ತಪಾಸಣೆ ನಡೆಸಿ ಯಾವುದೇ ರೀತಿಯ ಪ್ಲಾಸ್ಟಿಕ್‌ ವಸ್ತು, ನೀರಿನ ಬಾಟಲಿಗಳನ್ನು ಕೊಂಡೊಯ್ಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗ ಹತ್ತಾರು ಮಾರ್ಗಗಳ ಮೂಲಕ ಜಲಪಾತ ವೀಕ್ಷಣೆಗೆ ಬೆಟ್ಟಕ್ಕೆ ಹೋಗುವ ಚಾರಣಿಗರು ಪ್ಲಾಸ್ಟಿಕ್‌ ಬ್ಯಾಗ್‌, ಗಾಜಿನ ಬಾಟಲಿ, ಕುಡಿಯುವ ನೀರಿನ ಬಾಟಲಿಗಳನ್ನು ಕೊಂಡೊಯ್ದು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಇದರಿಂದ ಬೆಟ್ಟದಲ್ಲಿನ ಪರಿಸರ ಪ್ಲಾಸ್ಟಿಕ್‌ ಮಯವಾಗುತ್ತಿದೆ ಎನ್ನುತ್ತಾರೆಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.