ಆನೇಕಲ್: ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಮತ್ತು ಗಡಿಭಾಗ ಅತ್ತಿಬೆಲೆಗೆ ಹೊಸಬರು ಬಂದರೆ ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ಎಂದು ಕೇಳಿಕೊಂಡು ಹುಡುಕಾಡಲೇಬೇಕು. ಇನ್ನೂ ಅತ್ತಿಬೆಲೆ ಮೂಲಕ ಓಡಾಡುವ ಪ್ರಯಾಣಿಕರು ರಸ್ತೆ ಬದಿಯೇ ನಿಂತು ಬಸ್‌ಗಾಗಿ ಕಾಯಬೇಕು.
–ಇದು ಸಾರಿಗ ಸಚಿವ ರಾಮಲಿಂಗಾರೆಡ್ಡಿ ಅವರ ತವರು ತಾಲ್ಲೂಕಿನ ಸಾರಿಗೆ ವ್ಯವಸ್ಥೆ ವ್ಯಥೆ.
ಮೆಜಿಸ್ಟಿಕ್ ಬಿಟ್ಟರೆ ಅತ್ತಿಬೆಲೆಯಲ್ಲಿ ಹೆಚ್ಚು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತವೆ. ಅತ್ತಿಬೆಲೆ ಹೋಬಳಿ ಕೇಂದ್ರವಾದರೂ ಇಲ್ಲಿ ಒಂದು ಬಸ್ ನಿಲ್ದಾಣ ಇಲ್ಲ. ಹೀಗಾಗಿ ರಸ್ತೆ ಬದಿಯಲ್ಲೇ ಬಸ್‌ಗಾಗಿ ಕಾಯಬೇಕು. ರಾಷ್ಟ್ರೀಯ ಹೆದ್ದಾರಿಯನ್ನೇ ನಿಲ್ದಾಣ ಎಂದು ಗುರುತಿಸಲಾಗಿದ್ದು, ಇಲ್ಲಿ ಪ್ರತಿನಿತ್ಯ ಜನರು ಬಿಸಿಲು, ಮಳೆಯಲ್ಲಿ ಕಾದು ತೊಂದರೆ ಅನುಭವಿಸುತ್ತಿದ್ದಾರೆ. ನಿಗದಿತವಾದ ಸ್ಥಳವಿಲ್ಲದೆ ಜನರು ಮತ್ತು ಬಸ್‌ಗಳ ಚಾಲಕರು ಪರದಾಡುತ್ತಿದ್ದಾರೆ.
ತಾಲ್ಲೂಕಿನ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ–44 ಹಾದು ಹೋಗುತ್ತದೆ. ಅತ್ತಿಬೆಲೆ ವ್ಯಾಪ್ತಿಯಲ್ಲಿ ಕೈಗಾರಿಕೆ ಪ್ರದೇಶ ಹಾಗೂ ಹೊಸೂರಿಗೆ ಸಂಪರ್ಕ ಕಲ್ಪಿಸುತ್ತಿದೆ. ಇದು ಕರ್ನಾಟಕ ಮತ್ತು ತಮಿಳುನಾಡು ಸಂಪರ್ಕ ರಸ್ತೆಯಾಗಿದೆ. ಇಲ್ಲಿಂದ ನೆರೆ ರಾಜ್ಯ ತಮಿಳುನಾಡಿಗೆ ಮತ್ತು ಕರ್ನಾಟಕಕ್ಕೆ ಪ್ರತಿದಿನ ಸಾವಿರಾರು ಬಸ್‌ಗಳು ಸಂಚಾರ ಮಾಡುತ್ತವೆ. ವಾಹನ ಮತ್ತು ಜನದಟ್ಟಣೆ ಹೆಚ್ಚಾಗಿರುತ್ತದೆ. ಎರಡು ರಾಜ್ಯಗಳಿಗೂ ಕೊಂಡಿಯಾದ ಅತ್ತಿಬೆಲೆಯಲ್ಲಿ ಬಸ್ ನಿಲ್ದಾಣವಿಲ್ಲ.
ಅತ್ತಿಬೆಲೆ ಮತ್ತು ಹೊಸೂರು ಕೈಗಾರಿಕ ಪ್ರದೇಶವಾಗಿದೆ. ಉದ್ಯೋಗಕ್ಕಾಗಿ, ಶಾಲಾ–ಕಾಲೇಜುಗಳಿಗಾಗಿ ವಿವಿಧ ಕೆಲಸಗಳಿಗಾಗಿ ಜನರ ಓಡಾಟ ನಿರಂತರವಾಗಿರುತ್ತದೆ. ಇಂತಹ ಸ್ಥಳದಲ್ಲಿ ಬಸ್ ನಿಲ್ದಾಣವಿಲ್ಲ ನಿರ್ಮಿಸಬೇಕೆಂಬ ಸಾಮಾನ್ಯ ಜ್ಞಾನವು ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಇಲ್ಲವೇ ಎನ್ನುವುದು ಇಲ್ಲಿ ನಿತ್ಯ ಪ್ರಯಾಣಿಸುವ ಜನರ ಆಕ್ರೋಶದ ನುಡಿ.
ಜನರಷ್ಟೇ ರಸ್ತೆಗಳಲ್ಲಿ ನಿಲ್ಲುವುದಿಲ್ಲ ಬಸ್‌ಗಳಿಗೂ ನಿರ್ದಿಷ್ಟ ಸ್ಥಳ ಇಲ್ಲದೆ ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗದಲ್ಲಿ ನಿಲುಗಡೆಯಾಗುತ್ತಿವೆ. ಅತ್ತಿಬೆಲೆ ಪೊಲೀಸ್ ಠಾಣೆಯಿಂದ ಅತ್ತಿಬೆಲೆ ಟೋಲ್‌ವರೆಗೂ ಬಿಎಂಟಿಸಿ ಬಸ್‌ಗಳು ನಿಲ್ಲುತ್ತವೆ. ಸುಮಾರು 1ಕಿ.ಮೀ ವರೆಗೂ ಬಸ್‌ಗಳಲ್ಲಿ ಎಲ್ಲಂದರಲ್ಲಿ ನಿಂತಿರುತ್ತಿವೆ. ಇದರಿಂದ ಸಂಚಾರಕ್ಕೂ ತೊಡಕಾಗಿದೆ.
ಸರ್ಜಾಪುರ, ಹೊಸಕೋಟೆ, ದೊಮ್ಮಸಂದ್ರ ಭಾಗಗಳಿಗೆ ಅತ್ತಿಬೆಲೆಯ ಮೂಲಕವೇ ಸಂಚರಿಸಬೇಕು. ತಮಿಳುನಾಡಿನ ಹೊಸೂರು ಸೇರಿದಂತೆ ವಿವಿಧ ಭಾಗಗಳಿಗೆ ಪ್ರತಿದಿನ ಸಾವಿರಾರು ಮಂದಿ ಅತ್ತಿಬೆಲೆಯ ಮೂಲಕ ಓಡಾಡುತ್ತಾರೆ.
ಪ್ರತಿದಿನ ಈ ಮಾರ್ಗದಲ್ಲಿ ಪ್ರತಿದಿನ ಮೂರು ಸಾವಿರ ಶೆಡ್ಯೂಲ್‌ಗಳಲ್ಲಿ ಬಸ್‌ಗಳ ಓಡಾಟವಿದೆ. ಆದರೆ ಬಸ್ ನಿಲ್ದಾಣ ಇಲ್ಲ. ಇಲ್ಲೊಂದು ಬಸ್ ನಿಲ್ದಾಣ ನಿರ್ಮಿಸಿ ಎಂಬ ದಶಕಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.