ADVERTISEMENT

ದೊಡ್ಡಬಳ್ಳಾಪುರ: ಮೂರು ದಿನ ಮಕ್ಕಳ ಕಲರವ

ಜ.28ರಿಂದ ರಾಜ್ಯಮಟ್ಟದ ಭಾವೈಕ್ಯತಾ ಮೇಳ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 14:22 IST
Last Updated 25 ಜನವರಿ 2020, 14:22 IST
ಪತ್ರಿಕಾಗೋಷ್ಠಿಯಲ್ಲಿ ಭಾರತ ಸೇವಾದಳ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಸಿ.ವೆಂಕಟೇಶ್ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಭಾರತ ಸೇವಾದಳ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಸಿ.ವೆಂಕಟೇಶ್ ಮಾತನಾಡಿದರು   

ದೊಡ್ಡಬಳ್ಳಾಪುರ: ಜ.28ರಿಂದ ಮೂರು ದಿನಗಳ ಕಾಲ ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಭಾರತ ಸೇವಾದಳ ವತಿಯಿಂದ ರಾಜ್ಯಮಟ್ಟದ ಮಕ್ಕಳ ರಾಷ್ಟ್ರೀಯ ಭಾವೈಕ್ಯ ಮೇಳ ನಡೆಯಲಿದೆ ಎಂದು ಭಾರತ ಸೇವಾದಳ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಸಿ.ವೆಂಕಟೇಶ್‌ ಹೇಳಿದರು.

ಅವರು ನಗರದ ಗುರುಭವನ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೇ ಪ್ರಥಮ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಮಕ್ಕಳ ಮೇಳ ನಡೆಸಲಾಗುತ್ತಿದೆ. ಜ.28ರಂದು ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುವ ಮಕ್ಕಳ ಮೇಳವನ್ನು ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಗೃಹ ಸಚಿವ ಬಸವರಾಜ್‌ ಎಸ್‌. ಬೊಮ್ಮಾಯಿ, ಸಂಸತ್‌ ಸದಸ್ಯ ಬಿ.ಎನ್‌.ಬಚ್ಚೇಗೌಡ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಟಿ.ವೆಂಕಟರಮಣಯ್ಯ ವಹಿಸಲಿದ್ದಾರೆ ಎಂದರು.

ಜ.29ರಂದು ಬೆಳಿಗ್ಗೆ 8.45ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ಪ್ರಭಾತ್‌ ಫೇರಿಗೆ ಚಾಲನೆ ನೀಡಲಿದ್ದಾರೆ.

ADVERTISEMENT

ಮಧ್ಯಾಹ್ನ 3ಕ್ಕೆ ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ ಅವರು ಉತ್ತಮ ಶಿಕ್ಷಕರನ್ನು ಸನ್ಮಾನಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೃಷ್ಣಬೈರೇಗೌಡ ವಹಿಸಲಿದ್ದಾರೆ. ಜ.30ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ‌‌

ಮೂರು ದಿನಗಳ ಮಕ್ಕಳ ಮೇಳಕ್ಕೆ ಈಗಲಾಗಲೇ ಪೂರ್ವ ತಯಾರಿ ಅರಂಭವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಶಾಲೆಗಳಿಂದ ಐದು ಸಾವಿರ ಜನ ಮಕ್ಕಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಭಾವೈಕ್ಯ ಮೇಳದಲ್ಲಿ ಭಾಗವಹಿಸುವ ಮಕ್ಕಳಿಗೆ ಅಗತ್ಯ ವಸತಿ, ಊಟದ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಕ್ಕಳ ಮೇಳದ ಅಂಗವಾಗಿ ಉಪನ್ಯಾಸ ಸೇರಿದಂತೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಮಿತಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ವಿಭಾಗೀಯ ಸಂಘಟಕ ದಳಪತಿ ಎಚ್‌.ಎಸ್‌.ಚಂದ್ರಶೇಖರ್‌, ಜಿಲ್ಲಾ ಅಧ್ಯಕ್ಷ ಡಾ.ಕೆ.ಎನ್‌.ಪ್ರಕಾಶ್‌, ತಾಲ್ಲೂಕು ಅಧ್ಯಕ್ಷ ಕೆ.ಎನ್‌.ನಾಗೇಶ್‌, ಉಪಾಧ್ಯಕ್ಷ ಚನ್ನಕೃಷ್ಣ, ಕಾರ್ಯದರ್ಶಿ ಗಂಗಾಧರ್‌, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ, ಜಿಲ್ಲಾ ಸಮಿತಿ ಸದಸ್ಯರಾದ ಎಂ.ವಿ.ನೆಗಳೂರು, ಭೀಮರಾಜ್‌, ಮುತ್ತಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.