ADVERTISEMENT

ಶ್ರೇಷ್ಠ ಸಾಹಿತ್ಯಕ್ಕೆ ಸರ್ವಕಾಲಿಕ ಮಹತ್ವ: ಪ್ರೊ.ಚನ್ನಪ್ಪ ಕಟ್ಟಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 13:36 IST
Last Updated 9 ಮೇ 2025, 13:36 IST
ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಓದು ಕಮ್ಮಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಪ್ರಮುಖರು
ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಓದು ಕಮ್ಮಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಪ್ರಮುಖರು   

ಹೊಸಕೋಟೆ: ಶ್ರೇಷ್ಠ ಸಾಹಿತ್ಯ ಕಾಲಾದೇಶ ಮೀರಿ ಮಹತ್ವ ಪಡೆಯುತ್ತಾ ಹೋಗುತ್ತದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಹಯೋಗದೊಂದಿಗೆ ಬುಧವಾರ ಮತ್ತು ಗುರುವಾರ ಹಮ್ಮಿಕೊಂಡಿದ್ದ ಕುವೆಂಪು ಓದು ಕಮ್ಮಟ ಉದ್ಘಾಟಿಸಿ ಮಾತನಾಡಿದರು.

‘ಮತ ಪಂಥಗಳು ನಮ್ಮನ್ನು ಕುಬ್ಜರನ್ನಾಗಿ ಮಾಡಿದೆ. ಈ ಕುಬ್ಜತೆಯಿಂದ ಹೊರಬರಲು ಕುವೆಂಪು ಸಾಹಿತ್ಯ ಪ್ರೇರೇಪಿಸುತ್ತದೆ. ಮುಖ್ಯವಾಗಿ ಕುವೆಂಪು ಪ್ರತಿಪಾದನೆ ಮತ್ತು ಪ್ರತಿರೋಧ ಅರ್ಥ ಮಾಡಿಕೊಂಡು ಸಮಾಜಕ್ಕೆ ತೆರೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಕುವೆಂಪು ಅವರನ್ನು ಮತ್ತೆ ಮತ್ತೆ ಮುಖಾಮುಖಿಯಾಗುತ್ತಿರಬೇಕು’ ಎಂದರು.

ADVERTISEMENT

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಸಂಚಾಲಕ ಪ್ರೊ.ನಾರಾಯಣ ಘಟ್ಟ ಮಾತನಾಡಿ, ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರುವುದು, ಕನ್ನಡದ ಶ್ರೇಷ್ಠ ಕೃತಿಗಳನ್ನು ಜಾಗತಿಕ ಭಾಷೆಗಳಿಗೆ ಪರಿಚಯ ಮಾಡಿಕೊಡುವುದು ಕುವೆಂಪು ಭಾಷಾ ಭಾರತಿ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕುವೆಂಪು ಅವರನ್ನು ಪರಿಚಯಿಸಿ ಅವರ ಚಿಂತನೆಗಳನ್ನು ಮತ್ತಷ್ಟು ವಿಸ್ತರಿಸುವ ಕೆಲಸ ಮಾಡಲಾಗುತ್ತಿದೆ. ಈ ಓದು ವಿವೇಕದ ಜತೆಗೆ ವೈಚಾರಿಕ ಮನೋಭಾವ ತಂದು ಕೊಡಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ.ಬೇಗೂರು, ದೇಶದಾದ್ಯಂತ ಹಲವು ಸುಧಾರಣವಾದಿ ಬರಹಗಾರರು, ಸಮಾಜ ಸುಧಾರಕರನ್ನು ನೋಡಿದ್ದೇವೆ. ಅವರೆಲ್ಲರಲ್ಲಿಯೂ ಶ್ರೇಷ್ಠವಾಗಿ ನಿಲ್ಲುವ ಕವಿ ಕುವೆಂಪು. ಅವರೊಂದಿಗೆ ಇನ್ನು ಹಲವು ಶ್ರೇಷ್ಠ ಕನ್ನಡ ಸಾಹಿತಿಗಳ ಸಾಹಿತ್ಯವನ್ನು ಇಂಗ್ಲಿಷ್‌ಗೆ ಭಾಷೆಗೆ ಅನುವಾದಿಸಿದರೆ ಹೊರ ಜಗತ್ತಿಗೆ ಕನ್ನಡದ ಶ್ರೇಷ್ಠತೆ ಪರಿಚಯವಾಗಲಿದೆ ಎಂದರು.

ಕಮ್ಮಟದ ನಿರ್ದೇಶಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಕನ್ನಡ ವಿಭಾಗದ ಪ್ರಾಧ್ಯಾಪಕಿ ಪಿ.ಸಂಗೀತಾ, ನೆರವೇರಿಸಿಕೊಟ್ಟರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೆ.ರವಿಚಂದ್ರ, ಪ್ರೊ.ಎಚ್.ಇ.ರವಿಕುಮಾರ್, ಪ್ರೊ.ಈರಣ್ಣ, ಪ್ರೊ.ಅಶ್ವತ್ಥನಾರಾಯಣ, ಪ್ರೊ.ಮಾಲಿನಿ, ಪ್ರೊ.ಸಾದಿಕ್‌ಪಾಷಾ, ಪ್ರೊ.ಶ್ರೀನಿವಾಸ್ ಆಚಾರ್, ಪ್ರೊ.ವಿಶ್ವೇಶ್ವರಯ್ಯ, ಪ್ರೊ.ವೀರಭದ್ರ, ಮೋತಿರಾಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.