ADVERTISEMENT

‘ಸಕಾಲದಲ್ಲಿ ಸಾಲ ಮರು ಪಾವತಿಸಿ’

ರೈತರಿಗೆ ಹೊಸದಾಗಿ ಕೃಷಿ ಸಾಲ ನೀಡಲು ಅನುಕೂಲ l ಸಹಕಾರ ಬ್ಯಾಂಕ್‌ಗಳ ಅಭಿವೃದ್ಧಿಗೆ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 4:39 IST
Last Updated 22 ಡಿಸೆಂಬರ್ 2020, 4:39 IST
ಬಿಜೆಪಿ ಹಿರಿಯ ಮುಖಂಡ ಜೆ. ನರಸಿಂಹಸ್ವಾಮಿ ಮಾತನಾಡಿದರು
ಬಿಜೆಪಿ ಹಿರಿಯ ಮುಖಂಡ ಜೆ. ನರಸಿಂಹಸ್ವಾಮಿ ಮಾತನಾಡಿದರು   

ದೊಡ್ಡಬಳ್ಳಾಪುರ: ಸಹಕಾರ ಕ್ಷೇತ್ರ ಲಾಭದಾಯಕವಾಗಿ ನಡೆಯಲು ಮೊದಲು ನಿರ್ದೇಶಕರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಸಿ.ಡಿ.ಸತ್ಯನಾರಾಯಣಗೌಡ ಹೇಳಿದರು.

ಅವರು ನಗರದಲ್ಲಿ ನಡೆದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ 2020ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಸಹಕಾರ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಕೃಷಿಸಾಲ ಮನ್ನಾ ಮಾಡುವಾಗ ಪ್ರಾಥಮಿಕ ಸಹಕಾರ ಕೃಷಿ ಬ್ಯಾಂಕಿನಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡಬೇಕು. ಆದರೆ, ಈಚೆಗೆ ವಿಎಸ್‌ಎಸ್‌ಎನ್‌ಗಳಲ್ಲಿ ಪಡೆದ ಸಾಲ ಮಾತ್ರ ಮನ್ನಾ ಮಾಡಲಾಗುತ್ತಿದೆ. ಇದರಿಂದ ಇತರ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರು ಸಾಲ ಮರುಪಾವತಿ ಮಾಡದೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಸಹಕಾರ ಬ್ಯಾಂಕ್‌ಗಳಲ್ಲಿ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ನೀತಿ ಸರಿಯಾದ ಕ್ರಮ ಅಲ್ಲ ಎಂದರು.

ADVERTISEMENT

ಬಿಜೆಪಿ ಮುಖಂಡ ಜೆ.ನರಸಿಂಹಸ್ವಾಮಿ ಮಾತನಾಡಿ, ಕೃಷಿಗೆ ಹೆಚ್ಚಿನ ಸಾಲ ನೀಡುವ ಶಕ್ತಿಯಾದ ಸಹಕಾರ ಬ್ಯಾಂಕ್‌ ಬೆಳೆಸಿಕೊಳ್ಳಬೇಕು. ಕೃಷಿಕರಿಗೆ ಇತರ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಸಾಕಷ್ಟು ನಿಯಮಗಳಿವೆ. ಇದರಿಂದಾಗಿ ಸಕಾಲದಲ್ಲಿ ಸಾಲ ಪಡೆಯುವುದು ಕಷ್ಟವಾಗಲಿದೆ. ಉತ್ತಮ ಫಸಲು, ಸೂಕ್ತ ಬೆಲೆ ದೊರೆತರೆ ಎಲ್ಲ ರೈತರು ಸಹ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಾರೆ ಎಂದರು.

ಅಧ್ಯಕ್ಷತೆವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಟಿ.ವಿ. ಲಕ್ಷ್ಮೀನಾರಾಯಣ್‌ ಮಾತನಾಡಿ, ಕೋವಿಡ್‌-19 ನಂತರ ಬ್ಯಾಂಕ್‌ಗಳು ಸಾಕಷ್ಟು ಸಂಕಷ್ಟದ ಸ್ಥಿತಿಎದುರಿಸುತ್ತಿವೆ. ಸರ್ಕಾರ ಕೃಷಿ ಸಾಲದ ಮೇಲಿನ ಬಡ್ಡಿಮನ್ನಾ ಮಾಡಿದೆ. ಈ ಯೋಜನೆ ಸಮರ್ಪಕವಾಗಿ ಬಳಸಿಕೊಂಡ ರೈತರು ಸಾಕಷ್ಟು ಸಬ್ಸಿಡಿ ಪಡೆದಿದ್ದಾರೆ. ಬ್ಯಾಂಕ್‌ ಶೇಕಡ 50 ಸಾಲ ವಸೂಲಾತಿ ಗುರಿ ಸಾಧಿಸಿದೆ. ಇದರಿಂದಾಗಿ ರೈತರಿಗೆ ಹೊಸದಾಗಿ ಕೃಷಿ ಸಾಲ ನೀಡಲು ಸಹಕಾರಿಯಾಗಿದೆ ಎಂದರು.

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮುನಿಕೃಷ್ಣಪ್ಪ, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಬಿ.ಸಿ.ನಾರಾಯಣಸ್ವಾಮಿ, ಟಿ.ಎನ್‌.ಪ್ರಭುದೇವ್‌, ಎ.ನರಸಿಂಹಯ್ಯ, ಪಾಪಣ್ಣ, ವ್ಯವಸ್ಥಾಪಕ ದಕ್ಷಿಣಾಮೂರ್ತಿ ಹಾಗೂ ಬ್ಯಾಂಕಿನ ನಿರ್ದೇಶಕರು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.