ADVERTISEMENT

ರೈತರಿಗೆ ‘ಮರ ಮಿತ್ರ’ನ ಆಸರೆ

12 ವರ್ಷದಲ್ಲಿ 242 ಕೋಟಿ ಸಸಿ ನೆಡುವ ಗುರಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:51 IST
Last Updated 3 ಆಗಸ್ಟ್ 2021, 4:51 IST
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿ ನಡೆದ ಕಾವೇರಿ ಕೂಗು ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಚಾಲನೆ ನೀಡಿದರು
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿ ನಡೆದ ಕಾವೇರಿ ಕೂಗು ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಚಾಲನೆ ನೀಡಿದರು   

ದೇವನಹಳ್ಳಿ:ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಹೆಚ್ಚು ಮರಗಳನ್ನು ಬೆಳೆಸುವುದರಿಂದ ಉತ್ತಮ ಮಳೆಯಾಗಿ ಅಂತರ್ಜಲಮಟ್ಟ ಹೆಚ್ಚಾಗುತ್ತದೆ. ಕಾವೇರಿ ಕೂಗು ಅಭಿಯಾನದಡಿ ರೈತರಿಗೆ ಸಸಿ ವಿತರಿಸುವ ಮೂಲಕ ಅರಣ್ಯೀಕರಣ ಹೆಚ್ಚಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿ ಕಾವೇರಿ ಕೂಗು ಕಾರ್ಯಕ್ರಮದಡಿ ಅರಣ್ಯೀಕರಣ ಹೆಚ್ಚಿಸುವ ಕುರಿತು ನಡೆದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಶಾ ಫೌಂಡೇಶನ್ ಮೂಲಕ ನಡೆಯುತ್ತಿರುವ ಈ ಅಭಿಯಾನದಿಂದಾಗಿ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಒಂದಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಅರಣ್ಯೀಕರಣ ಹೆಚ್ಚಾಗಿ, ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶದಿಂದ ಹೆಚ್ಚು ಅನಾಹುತಗಳು ಸಂಭವಿಸಿವೆ ಎಂದು ಹೇಳಿದರು.

ADVERTISEMENT

ಕೆಲವು ಪ್ರದೇಶಗಳಲ್ಲಿ ಸಾವಿರಾರು ಅಡಿ ಆಳಕ್ಕೆ ಕೊಳವೆಬಾವಿ ಕೊರೆದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮರಗಳನ್ನು ಬೆಳೆಸುವುದು ಉತ್ತಮ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮ ಕುರಿತು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ರೈತರಿಗೆ ಅಗತ್ಯ ಮಾಹಿತಿ ನೀಡಿ, ರೈತರು ಬಯಸುವ ಸಸಿಗಳನ್ನು ನೀಡಬೇಕು. ಪಡೆದ ಸಸಿಗಳನ್ನು ರೈತರು ತಮ್ಮ ಜಮೀನಿನ ಬದುಗಳಲ್ಲಿ ನೆಡುವ ಮೂಲಕ ಅರಣ್ಯ ಕೃಷಿ ಮಾಡಬಹುದು. ಅವರ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.

ಸರ್ಕಾರಿ ಶಾಲೆಗಳು, ಅಂಗನವಾಡಿಗಳು, ವಸತಿ ನಿಲಯಗಳು, ಸರ್ಕಾರಿ ಕಚೇರಿ ಆವರಣದಲ್ಲಿ ಗಿಡ ನೆಟ್ಟು ಪೋಷಿಸಬೇಕು. ಮುಂದಿನ ಪೀಳಿಗೆಗೆ ಮರಗಳೇ ಆದಾಯದ ಮೂಲಗಳಾಗಿವೆ. ಅವು ಗಳನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.

ಆ. 4ರಂದು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ಸ್ಥಳೀಯ ಶಾಸಕರು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಗಿಡಗಳನ್ನು ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಗುವುದು. ಆ. 6ರಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಮರ ಮಿತ್ರ’ ಎಂಬ ತಂಡದೊಂದಿಗೆ ರೈತರಿಗೆ ಬೇಕಾದ ಸಸಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಶಾ ಫೌಂಡೇಶನ್‌ನ ಸ್ವಯಂ ಸೇವಕ ನವೀನ್ ಮಾತನಾಡಿ, ಸದ್ಗುರು ಮಾಡಿದಂತಹ ಜಲಾಂದೋಲನದ ಭಾಗವಾಗಿ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಮುಂದಿನ 12 ವರ್ಷಗಳಲ್ಲಿ 242 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದರು.

ಕಳೆದ ಕೆಲವು ದಶಕಗಳಲ್ಲಿ ನದಿ ಪಾತ್ರದ ಪ್ರದೇಶದಲ್ಲಿ ಶೇ 87ರಷ್ಟು ಮರಗಳನ್ನು ಕಡಿಯಲಾಗಿದೆ. ಇದರ ಪರಿಣಾಮ ಕಾವೇರಿ ನದಿ ತನ್ನ ಹರಿಯುವಿಕೆಯನ್ನು ಕಡಿತಗೊಳಿಸಿದೆ. ಸರ್ಕಾರದ ಸಹಯೋಗದಲ್ಲಿ ಮುಂದಿನ 4 ವಾರಗಳಲ್ಲಿ 1,785 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಲಾಗಿದೆ. ಎಲ್ಲಾ ಅಧಿಕಾರಿಗಳು ಸಹಕಾರ ನೀಡುವ ಮೂಲಕ ಕಾವೇರಿ ಕೂಗು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾವೇರಿ ಕೂಗು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿಕೃಷ್ಣಪ್ಪ, ಜಿಲ್ಲಾ ಸಾಮಾಜಿಕ ಅರಣ್ಯಾಧಿಕಾರಿ ಭಾಸ್ಕರ್, ಕೃಷಿ ಇಲಾಖೆಯ ಉಪ ನಿರ್ದೇಶಕಿ ವಿನುತಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರುಗೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.