ADVERTISEMENT

ಜನಜಾಗೃತಿ ಸಮಾವೇಶ | ವಿದ್ಯೆ ಜತೆ ಜೀವನ ಮೌಲ್ಯ ಕಲಿಸಿ: ಸಿದ್ದಲಿಂಗ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 14:28 IST
Last Updated 23 ನವೆಂಬರ್ 2023, 14:28 IST
ಆನೇಕಲ್ ತಾಲ್ಲೂಕಿನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯದ ರಾಜಗೋಪುರ ಕಲಶ ಉದ್ಘಾಟನೆ ಕಾರ್ಯಕ್ರಮದ ಪ್ರಯುಕ್ತ ನಡೆದ ಜನಜಾಗೃತಿ ಸಮಾವೇಶದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು
ಆನೇಕಲ್ ತಾಲ್ಲೂಕಿನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯದ ರಾಜಗೋಪುರ ಕಲಶ ಉದ್ಘಾಟನೆ ಕಾರ್ಯಕ್ರಮದ ಪ್ರಯುಕ್ತ ನಡೆದ ಜನಜಾಗೃತಿ ಸಮಾವೇಶದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು   

ಆನೇಕಲ್: ಗುರು ಶಿಷ್ಯರ ಸಂಬಂಧ ಅತ್ಯಂತ ಶ್ರೇಷ್ಠವಾದದ್ದು. ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಗುರುವಿನ ಪಾತ್ರ ಅವಶ್ಯಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗುರುವಿನ ಮಹತ್ವ ಕಡಿಮೆಯಾಗುತ್ತಿರುವುದು ಸಮಾಜಕ್ಕೆ ಹಿತದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯದ ರಾಜಗೋಪುರ ಕಲಶ ಉದ್ಘಾಟನೆ ಕಾರ್ಯಕ್ರಮದ ಪ್ರಯುಕ್ತ ಗುರುವಾರ ನಡೆದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಆದ್ಯತೆ ಮೇರೆಗೆ ಕಲಿಸಬೇಕು. ವಿದ್ಯಾಭ್ಯಾಸದ ಜೊತೆಗೆ ಜೀವನ ಕೌಶಲ ಮತ್ತು ಜೀವನ ಮೌಲ್ಯ ಕಲಿಸಲು ಮಹತ್ವ ನೀಡಬೇಕು. ಜೀವನದಲ್ಲಿ ಉತ್ತಮ ಮೌಲ್ಯಗಳಿದ್ದರೆ ಯಶಸ್ಸು ಗಳಿಸಬಹುದಾಗಿದೆ ಎಂದು ಹೇಳಿದರು.

ADVERTISEMENT

ಚಂಚಲವಾದ ಮನಸ್ಸುನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯಲು ಭಗವಂತನ ಸ್ಮರಣೆಯಿಂದ ಮಾತ್ರ ಸಾಧ್ಯ. ಹಾಗಾಗಿ ಪ್ರತಿಯೊಬ್ಬರು ದೇವರ ಧ್ಯಾನ, ಪೂಜೆಯನ್ನು ನಿತ್ಯ ಮಾಡುವ ಮೂಲಕ ಧಾರ್ಮಿಕತೆಯನ್ನು ಜೀವನದ ಭಾಗವನ್ನಾಗಿಸಬೇಕು ಎಂದರು.

ದೇವರನ್ನು ನಂಬುವುದರಿಂದ ಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಭಗವಂತನ ನಾಮಸ್ಮರಣೆಯು ಜೀವನಕ್ಕೆ ಹೊಸ ಚೈತನ್ಯ ನೀಡುತ್ತದೆ. ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಳು ಹೆಚ್ಚಾಗುವುದರಿಂದ ಗ್ರಾಮದ ಒಗ್ಗಟ್ಟು ಹೆಚ್ಚಾಗುತ್ತದೆ. ಹಾಗಾಗಿ ಧಾರ್ಮಿಕ ಕಾರ್ಯಗಳಿಗೆ ಗ್ರಾಮಗಳಲ್ಲಿ ಮಹತ್ವ ನೀಡಬೇಕು. ಪ್ರಾಚೀನ ದೇವಾಲಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ್‌ ಮಾತನಾಡಿ, ದೇವಾಲಯಗಳು ನೆಮ್ಮದಿಯ ತಾಣಗಳಾಗಿವೆ. ದೇವಾಲಯಗಳೆಂದರೆ ನ್ಯಾಯದಪೀಠಗಳಾಗಿದ್ದವು. ಸಂಗೀತ, ಸಾಹಿತ್ಯದ ಕೇಂದ್ರಗಳಾಗಿದ್ದವು. ಹಾಗಾಗಿಯೇ ಬ್ರಿಟಿಷರು, ಮೊಘಲರು ದೇವಾಲಯಗಳನ್ನು ನಾಶ ಮಾಡಿದ್ದರು. ದೇವಾಲಯಗಳು ನಾಶವಾದರೆ ಒಂದು ಸಂಸ್ಕೃತಿಯೇ ನಾಶವಾದಂತೆ. ಹಾಗಾಗಿ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಗಳನ್ನು ಉಳಿಸುವಲ್ಲಿ ದೇವಾಲಯಗಳ ಪಾತ್ರ ಪ್ರಮುಖವಾದುದ್ದು ಎಂದು ತಿಳಿಸಿದರು.

ರಾಜಾಪುರ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ತಾಲ್ಲೂಕಿನಲ್ಲಿ ನಿತ್ಯ ದಾಸೋಹ ನಡೆಯುತ್ತಿರುವ ಏಕೈಕ ದೇವಾಲಯ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯವಾಗಿದೆ. ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ಮತ್ತು ರಾಜಾಪುರ ಮಠಕ್ಕೆ ಅವಿನಭಾವ ಸಂಬಂಧವಿದೆ. ನಮ್ಮ ಮಠದ ಕ್ಷೇತ್ರಾಧಿಪತಿ ವೀರಭದ್ರಸ್ವಾಮಿಯಾಗಿದ್ದಾನೆ. ವ್ಯಕ್ತಿ ಶಕುನಿಯಾದರೆ ಸಮಾಜ ಕುರುಕ್ಷೇತ್ರವಾಗುತ್ತದೆ ಆದರೆ ವ್ಯಕ್ತಿ ವೀರಭದ್ರನಾದರೆ ಸಮಾಜದ ಸುಭದ್ರವಾಗುತ್ತದೆ’ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ್‌ ಮತ್ತು ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯದ ಟ್ರಸ್ಟ್‌ನ ಅಧ್ಯಕ್ಷ ಜಯರಾಜ್‌ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಗುಮ್ಮಳಾಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಾಗಸಂದ್ರ ಮಠದ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ಎಸ್‌.ಬಸವರಾಜು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಎಸ್‌.ನಟರಾಜ್‌, ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್‌, ಸದಸ್ಯರಾದ ಎಚ್‌.ಜೆ.ಪ್ರಸನ್ನಕುಮಾರ್‌, ಕಾಂತರಾಜು, ಮುಖಂಡರಾದ ಪರಮಶಿವಯ್ಯ, ರಾಜಶೇಖರ್‌, ಮರಿರಾಜು, ಬಸವರಾಜು, ಮರಿಸಿದ್ದಯ್ಯ, ಅಶೋಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.