ADVERTISEMENT

‘ಘಾಟಿ ಕ್ಷೇತ್ರದಲ್ಲಿ ಅಸ್ಪೃಶ್ಯತೆ ಆಚರಣೆ‘

ಭೋವಿ, ಬಂಜಾರ ಸಂಘದ ಮುಖಂಡರ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 13:28 IST
Last Updated 4 ಜನವರಿ 2020, 13:28 IST
ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮುದಾಯ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮುದಾಯ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿದರು   

ದೊಡ್ಡಬಳ್ಳಾಪುರ: ಘಾಟಿ ಕ್ಷೇತ್ರದಲ್ಲಿ ರಥೋತ್ಸವಕ್ಕೂ ಮುನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿಯನ್ನು ಭೋವಿ ಹಾಗೂ ಲಂಬಾಣಿ ಸಮುದಾಯ ಸೇರಿದಂತೆ ಇತರ ಜಾತಿ ಜನರು ವಾಸ ಮಾಡುವ ಬೀದಿಗಳಲ್ಲೂ ಮೆರವಣಿಗೆ ನಡೆಸುವಂತೆ 2019ರ ಜೂನ್‌ ತಿಂಗಳಲ್ಲೇ ಮುಜರಾಯಿ, ಸಮಾಜ ಕಲ್ಯಾಣ ಸೇರಿದಂತೆ ಇತರೆ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ಮನವಿಗೆ ಬೆಲೆ ನೀಡದೆ ಕೇವಲ ದೇವಾಲಯದ ಅರ್ಚಕರ ಮನೆ ಹಾಗೂ ಇತರೆ ಕಲ್ಯಾಣ ಮಂಟಪದ ಬಳಿಗೆ ಮಾತ್ರ ಉತ್ಸವಮೂರ್ತಿ ಮೆರವಣಿಗೆ ಕೊಂಡೊಯ್ಯಲಾಗಿದೆ. ಇದು ಖಂಡನೀಯ ಎಂದು ಭೋವಿ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಾತ್ರೆ ದಿನ ಎಲ್ಲ ಬೀದಿಗಳಿಗಳಲ್ಲೂ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗುವುದು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಜಾತ್ರೆ ದಿನ ಅರ್ಚಕರ ಮನೆಗಳಿಗೆ ಮಾತ್ರ ಉತ್ಸವಮೂರ್ತಿ ಮೆರವಣಿಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಎನ್ನುವ ಉತ್ತರ ನೀಡುತ್ತಾರೆ. ‌ಪ್ರಜಾಪ್ರಭುತ್ವ ಆಡಳಿತದಲ್ಲಿ ಬದುಕುತ್ತಿರುವ ಜನರಿಗೆ ಸಂಪ್ರದಾಯಗಿಂತಲೂ ಇಲ್ಲಿ ಸಂವಿಧಾನ ದೊಡ್ಡದು. ಇಲ್ಲಿ ಎಲ್ಲರೂ ಸಮಾನರು. ಉತ್ಸವ ಮೂರ್ತಿಯನ್ನು ಅರ್ಚಕರ ಮನೆಗಳಿಗೆ ಮಾತ್ರ ಮೆರವಣಿಗೆ ಕೊಂಡೊಯ್ಯುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಗೋಪಾಲ ನಾಯ್ಕ್‌ ಮಾತನಾಡಿ, ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ‘ಡಿ’ ಗ್ರೂಪ್‌ ನೌಕರರಾಗಿ ಕೆಲಸ ಮಾಡುತ್ತಿರುವವರೆಲ್ಲರು ದಲಿತ ಮತ್ತು ಹಿಂದುಳಿದ ವರ್ಗದ ಜನರೇ ಹೆಚ್ಚಾಗಿದ್ದಾರೆ. ದೇವಾಲಯದಲ್ಲಿ ಕೆಲಸ ಮಾಡುವ ಎಲ್ಲರೂ ಒಂದು ದಿನ ಉತ್ಸವ ನಡೆಸಬೇಕು ಎಂದು ಮನವಿ ಮಾಡಿಕೊಂಡಿರೂ ಅವಕಾಶ ನೀಡುತ್ತಿಲ್ಲ ಎಂದರು.

ADVERTISEMENT

ದೇವಾಲಯಕ್ಕೆ ಪ್ರತಿದಿನ ನೂರಾರು ಭಕ್ತಾದಿಗಳು ಬಂದು ಹೋಗುತ್ತಾರೆ. ಆದರೆ, ದೇವಾಲಯದ ಸುತ್ತಮುತ್ತ ಸ್ವಚ್ಛತೆ ಇಲ್ಲದಾಗಿದೆ. ಮುಂದಿನ ಜಾತ್ರೆಯೊಳಗೆ ನಿರ್ಧಾರ ಕೈಗೊಂಡು ಭೋವಿ, ಬಂಜಾರ ಸಮುದಾಯ ಸೇರಿದಂತೆ ಎಲ್ಲ ಹಿಂದುಳಿದ ವರ್ಗದ ಜನರು ವಾಸ ಮಾಡುವ ಬೀದಿಗಳಿಗೂ ಉತ್ಸವಮೂರ್ತಿ ಮೆರವಣಿಗೆ ಕೊಂಡೊಯ್ಯಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಂಜಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶಂಕರ್‌, ಉಪಾಧ್ಯಕ್ಷ ಕೆ.ಎನ್‌.ಗಂಗಾಧರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.