ADVERTISEMENT

ಶೂನ್ಯ ಬಡ್ಡಿ ಸಾಲ ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 12:19 IST
Last Updated 28 ಅಕ್ಟೋಬರ್ 2019, 12:19 IST
ರೈತರಿಗೆ ಸಾಲದ ಚೆಕ್ ವಿತರಿಸಿದ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್.
ರೈತರಿಗೆ ಸಾಲದ ಚೆಕ್ ವಿತರಿಸಿದ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್.   

ದೇವನಹಳ್ಳಿ: ಹಿಂಗಾರು ಕೃಷಿ ಚಟುವಟಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದಿರುವ ರೈತರು ಸದುಪಯೋಗಪಡೆದುಕೊಳ್ಳಬೇಕು ಎಂದು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್ ಹೇಳಿದರು.

ಇಲ್ಲಿನ ಕುಂದಾಣ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಫಲಾನುಭವಿ ರೈತರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು, ‘ಪ್ರಸ್ತುತ 34 ರೈತರಿಗೆ ₹ 20.80 ಲಕ್ಷ ಬೆಳೆ ಸಾಲ ವಿತರಿಸಲಾಗುತ್ತಿದೆ. ಮತ್ತೆ 62 ಅರ್ಜಿಗಳು ಸಾಲ ಕೋರಿ ಸಲ್ಲಿಕೆಯಾಗಿದ್ದು ಅಂದಾಜು ₹ 50 ಲಕ್ಷ ರೈತರಿಗೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಹೇಳಿದರು.

2018ನೇ ಸಾಲಿನಲ್ಲಿ ₹ 1.52 ಕೋಟಿ ಮೊತ್ತ ಸಾಲ ನೀಡಲಾಗಿತ್ತು. ತೋಟಗಾರಿಕೆ ಬೆಳೆ ಮತ್ತು ಮೂಲ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಒತ್ತು ನೀಡಲಾಗುತ್ತಿದೆ. ಸ್ವಾವಲಂಬಿಯಾಗಿ ಆರ್ಥಿಕ ಚೈತನ್ಯ ಪಡೆದುಕೊಳ್ಳಲು ಸ್ವಸಹಾಯ ಗುಂಪು ಮತ್ತು ಸ್ತ್ರೀಶಕ್ತಿ ಸಂಘಗಳಿಗೂ ಆದ್ಯತೆ ಇದೆ ಎಂದು ಹೇಳಿದರು.

ADVERTISEMENT

‘ಕೃಷಿ ಸಾಲವನ್ನು ಕೃಷಿಯೇತರ ಕಾರ್ಯಗಳಿಗೆ ಬಳಸಬಾರದು. ಫಸಲು ಕೊಯ್ಲು ಆದ ತಕ್ಷಣ ಜಮೀನುಗಳಲ್ಲಿ ಮಳೆ ನೀರು ಹರಿದುಹೋಗದಂತೆ ಬದುಗಳನ್ನು ನಿರ್ಮಿಸಬೇಕು. ನೀರು ನಿಲ್ಲುವುದರಿಂದ ಜಮೀನುಗಳಲ್ಲಿ ತೇವಾಂಶ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಜತೆಗೆ ಆಳವಾಗಿ ಉಳುಮೆ ಮಾಡಲು ಸಹಕಾರಿಯಾಗಲಿದೆ. ಬದುಗಳ ಪಕ್ಕದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಬೆಳೆಸಿದರೆ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಸಂಕಷ್ಟ ನಿವಾರಣೆಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ವಿಶ್ವನಾಥಪುರ ಪೊಲೀಸ್ ಠಾಣೆ ಪಿ.ಎಸ್.ಐ. ಪ್ರದೀಪ್ ಪೂಜಾರಿ ಮಾತನಾಡಿ, ‘ಕೆಲವು ಕಡೆ ಗ್ರಾಮ ಸಭೆಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ ಐದು ಲಕ್ಷ ಪರಿಹಾರ ನೀಡಲಿದೆ ಎಂದು ಹೇಳಲಾಗುತ್ತಿದೆ. ಯಾರೇ ಆಗಲಿ ಆತ್ಮಹತ್ಯೆ ಪರಿಹಾರ ವಿಷಯದ ಬಗ್ಗೆ ಮಾತನಾಡಬಾರದು ಇದೊಂದು ರೀತಿಯಲ್ಲಿ ಪ್ರಚೋದನೆ ನೀಡಿದಂತಾಗುತ್ತದೆ. ಸಾಲ ಪಡೆದ ರೈತರು ಸದುದ್ದೇಶಕ್ಕೆ ಬಳಕೆ ಮಾಡಿದರೆ ಯಾವುದೇ ತೊಂದರೆ ಕುಟುಂಬಕ್ಕೆ ಬರುವುದಿಲ್ಲ. ಇತರ ಚಟುವಟಿಕೆಗೆ ಉಪಯೋಗಿಸಿದರೆ ಸಾಲ ಮರುಪಾವತಿಸಲು ಕಷ್ಟವಾಗುತ್ತದೆ. ಇದನ್ನು ರೈತರು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದರು.

ಸಹಕಾರ ಸಂಘದ ನಿರ್ದೇಶಕರಾದ ಮಂಜುನಾಥ್, ಲಕ್ಷ್ಮಣ್, ಮುನಿರಾಜು, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.