ADVERTISEMENT

ದೊಡ್ಡಬಳ್ಳಾಪುರ: ವಾಲ್ಮೀಕಿ ನಿಗಮದ ಹಗರಣ ಸಿಬಿಐ ತನಿಗೆ ವಹಿಸಲು ಆಗ್ರಹ

ಸ್ವಾಭಿಮಾನಿ ಎಸ್‌‌.ಸಿ, ಎಸ್‌.ಟಿ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 15:15 IST
Last Updated 29 ಜುಲೈ 2024, 15:15 IST
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಸ್ವಾಭಿಮಾನಿ ಎಸ್‌.ಸಿ,ಎಸ್‌.ಟಿ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ನಡೆದ ಪತ್ರಿಭಟನೆಯಲ್ಲಿ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಸ್ವಾಭಿಮಾನಿ ಎಸ್‌.ಸಿ,ಎಸ್‌.ಟಿ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ನಡೆದ ಪತ್ರಿಭಟನೆಯಲ್ಲಿ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿದರು   

ದೊಡ್ಡಬಳ್ಳಾಪುರ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಜನಾಂಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಲೂಟಿಕೋರರಿಂದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿ ಸ್ವಾಭಿಮಾನಿ ಎಸ್‌‌.ಸಿ, ಎಸ್‌.ಟಿ ಸಂಘಟನೆಗಳ ಒಕ್ಕೂಟದಿಂದ ನಗರದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪತ್ರಿಭಟನೆ ನಡೆಯಿತು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಹಗರಣಕ್ಕೆ ಕಾರಣ ಆಗಿರುವ ಸಚಿವರ ರಾಜೀನಾಮೆ ಪಡೆದುಕೊಂಡಿರುವುದರಿಂದ ಕಾಂಗ್ರೆಸ್‌ ಪಕ್ಷ ಹಗರಣವನ್ನು ಒಪ್ಪಿಕೊಂಡಂತೆ ಆಗಿದೆ. ಹಗರಣದಲ್ಲಿನ ಹಣವು ಲೋಕಸಭಾ ಚುನಾವಣೆಗೆ ಬಳಕೆಯಾಗಿದ್ದು, ರಾಜ್ಯ ಸರ್ಕಾರದ ಆಡಳಿತ ವೈಖರಿ ದೇಶದ ಮುಂದೆ ಬೆತ್ತಲಾಗುವಂತೆ ಹಾಗೂ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆಯ ಲೆಕ್ಕಾಧಿಕಾರಿ ಪಿ.ಚಂದ್ರಶೇಖರ್ ಅವರ ಆತ್ಮಹತ್ಯೆ ಹಗರಣದ ಎಲ್ಲಾ ವಿವರ ಬಯಲು ಮಾಡಿದೆ. ತನಿಖೆ ತೀವ್ರವಾಗಿರುವುದರಿಂದ ಹಗರಣವು ವಿವಿಧ ತಿರುವು ಪಡೆದುಕೊಂಡು ಇದರ ನೇರ ಹೊಣೆಯನ್ನು ರಾಜ್ಯದ ಮುಖ್ಯಮಂತ್ರಿಗಳು ಹೊರುವಂತಹ ಘಟ ತಲುಪಿದೆ. ಮುಖ್ಯಮಂತ್ರಿಗಳು ಈ ಹಗಣರದ ಕುರಿತು ಲಘುವಾಗಿ ಪರಿಗಣಿಸಿರುವುದು ಮತ್ತು ತಮ್ಮ ಸಹೋದ್ಯೋಗಿ ಸಚಿವರಿಂದ ಹೇಳಿಕೆಗಳನ್ನು ಕೊಡಿಸುವ ಮೂಲಕ ತಮ್ಮ ತಲೆದಂಡ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ. ತಮ್ಮ ಮೂಗಿನಡಿಯಲ್ಲೇ ನಡೆದಿರುವ ಹಗರಣಕ್ಕೆ ತಾವೇ ನೈತಿಕ ಹೊಣೆ ಹೊರಬೇಕು. ಸದನದ ಸಭಾಪತಿ ಮುಖ್ಯಮಂತ್ರಿ ರಾಜೀನಾಮೆ ಪಡೆದು ಪರಿಶಿಷ್ಟ ಜನಾಂಗಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆ ಹಣದ ದುರುಪಯೋಗವು ನೇರವಾಗಿ ಮುಖ್ಯಮಂತ್ರಿಗಳಿಂದ ಅಥವಾ ಅವರ ನಿರ್ದೇಶನದಲ್ಲೇ ನಡೆದಿದೆ ಎಂದು ದೂರಿದರು.

ಪರಿಶಿಷ್ಟರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಮತ್ತು ವಿದೇಶಿ ವಿದ್ಯಾರ್ಥಿ ವೇತನ ಕಡಿತಗೊಳಿಸುವ ಮೂಲಕ ಮುಖ್ಯಮಂತ್ರಿಗಳು ದಲಿತ ದ್ರೋಹಿಯಾಗಿದ್ದಾರೆ. ಈ ಕಾರಣಗಳಿಗಾಗಿ ಸ್ವಾಭಿಮಾನಿ ಎಸ್‌.ಸಿ, ಎಸ್‌.ಟಿ ಸಂಘಟನೆಗಳ ಒಕ್ಕೂಟವು ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಈಗಾಗಲೇ ಮನವಿ ಪತ್ರ ಸಲ್ಲಿಸಿದೆ. ಎರಡನೇ ಹಂತದ ಹೋರಾಟವಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ, ಎಲ್ಲಾ ತಹಶೀಲ್ದಾರ್‌ಗಳ ಮೂಲಕ ರಾಜ್ಯಪಾಲರಿಗೆ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ. ಮೂರನೇ ಹಂತದ ಹೋರಾಟದಲ್ಲಿ ವಿಧಾನಸೌಧ ಚಲೋ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಓಬಳೇಶ್‌, ಅಬ್ದುಲ್‌ಸತ್ತಾರ್‌, ಓಂಕಾರಪ್ಪ ಇದ್ದರು.

ಸಿ.ಎಂ ರಾಜೀನಾಮೆ ನೀಡಲಿ

ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿರುವುದರಿಂದ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲದಾಗಿದೆ. ಈ ಕೂಡಲೆ ರಾಜೀನಾಮೆ ನೀಡಬೇಕು ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.