ADVERTISEMENT

"ವಾಲ್ಮೀಕಿ ತತ್ವ, ಆದರ್ಶ ದಾರಿದೀಪ'

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 14:19 IST
Last Updated 24 ಅಕ್ಟೋಬರ್ 2018, 14:19 IST
ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಹೂವಿನ ಪಲ್ಲಕ್ಕಿಗೆ ಅಧ್ಯಕ್ಷೆ ವಸಂತಮ್ಮ ಸುಬ್ರಮಣಿ ಚಾಲನೆ ನೀಡಿದರು. ಉಪಾಧ್ಯಕ್ಷ ಎಸ್.ಹರೀಶ್, ರಾಜಪ್ಪ ಇದ್ದರು
ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಹೂವಿನ ಪಲ್ಲಕ್ಕಿಗೆ ಅಧ್ಯಕ್ಷೆ ವಸಂತಮ್ಮ ಸುಬ್ರಮಣಿ ಚಾಲನೆ ನೀಡಿದರು. ಉಪಾಧ್ಯಕ್ಷ ಎಸ್.ಹರೀಶ್, ರಾಜಪ್ಪ ಇದ್ದರು   

ವಿಜಯಪುರ: ಮಹರ್ಷಿ ವಾಲ್ಮೀಕಿ ಅವರ ತತ್ವ ಮತ್ತು ಆದರ್ಶ ಸರ್ವಕಾಲಕ್ಕೂ ದಾರಿದೀಪ ಎಂದು ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಮ್ಮ ಸುಬ್ರಮಣಿ ಹೇಳಿದರು.

ಹೋಬಳಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಾಲ್ಮೀಕಿ ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಬಲಾಢ್ಯವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಸಂಘಟನೆ ಅಗತ್ಯವಾಗಿದೆ. ಸಮಾಜದ ಮುಖಂಡರು ಈ ಕುರಿತು ಕಾರ್ಯೋನ್ಮುಖರಾಗಬೇಕು. ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಹ ಫಲಾನುಭವಿಗಳು ಅದರ ಸದುಪಯೋಗ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಸಮುದಾಯದ ಸುಶಿಕ್ಷಿತರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಉಪಾಧ್ಯಕ್ಷ ಎಸ್.ಹರೀಶ್ ಮಾತನಾಡಿ, ವಾಲ್ಮೀಕಿ ಅವರಲ್ಲೊಬ್ಬ ಅಧ್ಯಾತ್ಮ ಅರಿವಿನ ಗುರು ಇದ್ದ ಎಂಬುದನ್ನು ಜಗತ್ತಿಗೆ ತಿಳಿಸಬೇಕಿದೆ. ವಾಲ್ಮೀಕಿ ಆತ್ಮಜ್ಞಾನದಿಂದ ತ್ರಿಕಾಲ ಜ್ಞಾನಿಯಾಗಿದ್ದರು. ಬೇಡ ಸಂಸ್ಕೃತಿ ಬ್ರಿಟಿಷರಿಂದ ಅವನತಿಯತ್ತ ಸಾಗಿತು. ಅವರ ಸಹಾಯಕ ಸೈನ್ಯ ಪದ್ಧತಿ, ನಿಶಸ್ತ್ರೀಕರಣ ಕಾಯ್ದೆ, ಅರಣ್ಯ ಕಾಯ್ದೆ ಹಾಗೂ ಇನಾಂಭೂಮಿ ವಶಪಡಿಸಿಕೊಳ್ಳುವಮೂಲಕ ಬೇಡ ಜನಾಂಗವನ್ನು ಹತ್ತಿಕ್ಕುವ ಕಾರ್ಯ ನಡೆದಿತ್ತು ಎಂದು ಇತಿಹಾಸ ವಿಶ್ಲೇಷಿಸಿದರು.

ಸದಸ್ಯ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ರಾಮಾಯಾಣ ಗ್ರಂಥದ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹರ್ಷಿ ಜಗತ್ತಿನ ಶ್ರೇಷ್ಠ ದಾರ್ಶನಿಕ ಪುರುಷ ಎಂದು ಹೇಳಿದರು.

ಪಂಚಾಯಿತಿ ಕಚೇರಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಹೂವಿನ ಪಲ್ಲಕ್ಕಿಯಲ್ಲಿ ಭಾವಚಿತ್ರವಿಟ್ಟು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವೆಂಕಟೇಶ್, ಸದಸ್ಯರಾದ ಸೊಣ್ಣೇಗೌಡ, ಮಾಲ, ಮುನಿರಾಜು, ವರಲಕ್ಷ್ಮಮ್ಮ, ಭಾಗ್ಯಮ್ಮ, ಸುಬ್ರಮಣಿ, ಕಾರ್ಯದರ್ಶಿ ಯಶೋದ್‌ ಕುಮಾರ್, ಕರವಸೂಲಿಗಾರ ಮುನಿಕೃಷ್ಣ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.