ADVERTISEMENT

ವೇಣುಗೋಪಾಲಸ್ವಾಮಿ ರಥೋತ್ಸವ

ಆನೇಕಲ್‌: ಇಂದು ಪ್ರಾಕಾರೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 18:56 IST
Last Updated 26 ಜನವರಿ 2023, 18:56 IST
ಆನೇಕಲ್‌ನ ವೇಣುಗೋಪಾಲಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಆನೇಕಲ್‌ನ ವೇಣುಗೋಪಾಲಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಆನೇಕಲ್: ಪಟ್ಟಣದ ವೇಣುಗೋಪಾಲ ಸ್ವಾಮಿ ರಥೋತ್ಸವ ಗುರುವಾರ ವೈಭವದಿಂದ ನಡೆಯಿತು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಕಲ್ಯಾಣ ಮಂಟಪ ರಸ್ತೆಯಲ್ಲಿನ ದೇವಾಲಯದಲ್ಲಿ ರಥೋತ್ಸವ ಪ್ರಯುಕ್ತ ವಿಶೇಷ ಅಲಂಕಾರ, ಪೂಜೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಧಾರ್ಮಿಕ ಕಾರ್ಯ ನೆರವೇರಿಸಿದ ನಂತರ ಅಲಂಕೃತ ರಥದಲ್ಲಿ ವೇಣುಗೋಪಾಲ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೂರಿಸಲಾಯಿತು.

ನೆರೆದಿದ್ದ ಭಕ್ತರು ಗೋವಿಂದ ಗೋವಿಂದ ಎಂಬ ಜಯಘೋಷ ಮಾಡಿ ದವನ ಚುಚ್ಚಿದ ಬಾಳೆಹಣ್ಣನ್ನು ರಥದೆಡೆಗೆ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥವು ಚರ್ಚ್ ರಸ್ತೆ, ತ್ಯಾಗರಾಜ ರಸ್ತೆ, ತಿಲಕ್ ವೃತ್ತದ ಮೂಲಕ ಹಾದು ಸಂಜೆ 5ರ ವೇಳೆಗೆ ದೇವಾಲಯ ತಲುಪಿತು.

ADVERTISEMENT

ಮನೆಗಳ ಬಳಿ ಭಕ್ತರು ಸ್ವಾಮಿಗೆ ಪೂಜೆ ಸಲ್ಲಿಸಿದರು. ಅರವಟಿಗೆ ಸ್ಥಾಪಿಸಿ ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು. ರಥೋತ್ಸವದ ಅಂಗವಾಗಿ ಹನುಮಂತೋತ್ಸವ, ಪೂಲಂಗಿ ಸೇವೆ, ಶೇಷ ವಾಹನೋತ್ಸವ, ಕಲ್ಯಾಣೋತ್ಸವ, ಪ್ರಾಕಾರೋತ್ಸವ, ಶ್ರೀಕೃಷ್ಣ ಗಂಧೋತ್ಸವ ಆಯೋಜಿಸಲಾಗಿತ್ತು. ಸಂಜೆ ಧೂಳೋತ್ಸವ ಹಾಗೂ ತಿರುವಿಡಿ ಉತ್ಸವ ನಡೆಯಿತು.

ಜಾತ್ರೆ ಅಂಗವಾಗಿ ಜ. 27ರಂದು ಪ್ರಾಕಾರೋತ್ಸವ, ಸೂರ್ಯ ಮಂಡಲೋತ್ಸವ ನಡೆಯಲಿದೆ. ಜ. 28ರಂದು ತಿರುವೀದಿ ಉತ್ಸವ, ವಸಂತೋತ್ಸವ, ಉಂಜಲ್‌ ಸೇವೆ, ಶಯನೋತ್ಸವ, ರಥಸಪ್ತಮಿ ನಡೆಯಲಿದೆ. ಶ್ರೀನಾಥ ಭಟ್ಟರ್‌ ಮತ್ತು ಗೋವಿಂದ ಭಟ್ಟರ್‌ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.

ಶಾಸಕ ಬಿ. ಶಿವಣ್ಣ, ಮುಖಂಡರಾದ ಟಿ.ವಿ. ಬಾಬು, ಬಿ.ವೈ. ರವಿಚಂದ್ರ, ಪುರಸಭಾ ಅಧ್ಯಕ್ಷ ಪದ್ಮನಾಭ, ಉಪಾಧ್ಯಕ್ಷೆ ಮಾಲಾ ಭಾರ್ಗವ್‌, ಹಾಪ್‌ಕಾಮ್ಸ್‌ ನಿರ್ದೇಶಕ ಜೆ. ನಾರಾಯಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.