ADVERTISEMENT

ದೇವನಹಳ್ಳಿ | ತೆರಿಗೆ ಕಟ್ಟದ ಮಳಿಗೆ ಮುಂದೆ ಕಸದ ವಾಹನ

ತೆರಿಗೆ ವಸೂಲಿಗೆ ವಿಜಯಪುರ ಪುರಸಭೆ ಅಧಿಕಾರಿಗಳ ಹೊಸ ತಂತ್ರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 7:35 IST
Last Updated 14 ಡಿಸೆಂಬರ್ 2023, 7:35 IST
ವಿಜಯಪುರ ಪಟ್ಟಣದ ಕೋಲಾರ ರಸ್ತೆಯಲ್ಲಿ ಪುರಸಭೆಗೆ ತೆರಿಗೆ ಕಟ್ಟಡ ವಾಣಿಜ್ಯ ಮಳಿಗೆಗಳ ಮುಂದೆ ಪುರಸಭೆಯವರು ಕಸದ ವಾಹನಗಳನ್ನು ಸಾಲಾಗಿ ನಿಲ್ಲಿಸಿರುವುದು.
ವಿಜಯಪುರ ಪಟ್ಟಣದ ಕೋಲಾರ ರಸ್ತೆಯಲ್ಲಿ ಪುರಸಭೆಗೆ ತೆರಿಗೆ ಕಟ್ಟಡ ವಾಣಿಜ್ಯ ಮಳಿಗೆಗಳ ಮುಂದೆ ಪುರಸಭೆಯವರು ಕಸದ ವಾಹನಗಳನ್ನು ಸಾಲಾಗಿ ನಿಲ್ಲಿಸಿರುವುದು.   

ವಿಜಯಪುರ(ದೇವನಹಳ್ಳಿ): ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗಳಿಂದ ತೆರಿಗೆ ವಸೂಲಿಗೆ ಪುರಸಭೆ ಅಧಿಕಾರಿಗಳು ಹೊಸ ತಂತ್ರ ರೂಪಿಸಿದ್ದಾರೆ. ‌ತೆರಿಗೆ ಕಟ್ಟಡ ಮಳಿಗೆಗಳ ಮುಂದೆ ಕಸದ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ.

ಪುರಸಭೆಗೆ ತೆರಿಗೆ ಕಟ್ಟದ ಮಳಿಗೆಗಳ ಮುಂದೆ ಬುಧವಾರ ಕಸದ ವಾಹನ ನಿಲ್ಲಿಸಿ, ತೆರಿಗೆ ಪಾವತಿಗೆ ತಾಕೀತು ಮಾಡಲಾಯಿತು.

ಹಲವಾರು ಬಾರಿ ತೆರಿಗೆ ಕಟ್ಟುವಂತೆ ಅಧಿಕಾರಿಗಳು ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ನೊಟೀಸ್ ಜಾರಿಗೊಳಿಸಿದರೂ, ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಸದ ವಾಹನಗಳನ್ನು ತಂದು ವಾಣಿಜ್ಯ ಮಳಿಗೆಗಳ‌ ಮುಂದೆ ನಿಲ್ಲಿಸಿ, ತೆರಿಗೆ ಪಾವತಿಸುವ ತನಕ ವಾಹನಗಳನ್ನು ತೆಗೆಯುವುದಿಲ್ಲ. ನಿಮ್ಮ ಮಳಿಗೆಗಳಿಂದ ಕಸ ಸಂಗ್ರಹ ಮಾಡಿಕೊಳ್ಳುವುದಿಲ್ಲವೆಂದು ಪಟ್ಟು ಹಿಡಿದಿದ್ದರು.

ADVERTISEMENT

ಈ ವೇಳೆ ಕೆಲವು ಮಂದಿ ವ್ಯಾಪಾರಿಗಳು ತೆರಿಗೆ ಕಟ್ಟಲು ಸಮಯಾವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಇನ್ನು ಕೆಲವರು ಒಂದು ವರ್ಷದ ತೆರಿಗೆಯನ್ನು ಕಟ್ಟುತ್ತೇವೆ ಎಂದು ಕೆಲವರು ಕಟ್ಟಿದ್ದಾರೆ. ಒಂದೆರಡು ದಿನಗಳಲ್ಲಿ ತೆರಿಗೆ ಪಾವತಿ ಮಾಡುವುದಾಗಿ ಮನವಿ ಮಾಡಿಕೊಂಡಿದ್ದರಿಂದ ಅಧಿಕಾರಿಗಳು ಕಸದ ವಾಹನಗಳನ್ನು ವಾಣಿಜ್ಯ ಮಳಿಗೆಗಳ ಬಳಿಯಿಂದ ತೆರವುಗೊಳಿಸಿದರು.

‘ನಮಗೆ ಮೂರು ತಿಂಗಳಾದರೂ ವೇತನ ಕೊಟ್ಟಿಲ್ಲ. ನಾವು ಜೀವನ ಮಾಡುವುದು ಹೇಗೆ? ಮನೆಗಳು ಬಾಡಿಗೆ ಕಟ್ಟುವುದು ಹೇಗೆ? ಆದ್ದರಿಂದ ನಾವು ಕಸದ ವಾಹನಗಳನ್ನು ತಂದು ನಿಲ್ಲಿಸಿದ್ದೇವೆ’ ಎಂದು ಪೌರಕಾರ್ಮಿಕರು ಹೇಳಿದರು.

ಪುರಸಭೆಯವರು ಕಸದ ವಾಹನ ತಂದು ವ್ಯಾಪಾರ ಮಾಡುವ ಮಳಿಗೆಗಳ ಮುಂದೆ ನಿಲ್ಲಿಸಿರುವುದರಿಂದ ನಮಗೆ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ. ಕಸದ ವಾಹನಗಳಿಂದ ಬರುತ್ತಿರುವ ದುರ್ವಾಸನೆಯಿಂದಾಗಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನಮ್ಮ ಆರೋಗ್ಯ ಹದಗೆಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳು ಹೀಗೆ ನಡೆದುಕೊಳ್ಳಬಾರದು. ತೆರಿಗೆ ಕಟ್ಟಬೇಕಾದರೆ ನೊಟೀಸ್ ಜಾರಿ ಮಾಡಲಿ, ಅದನ್ನು ಬಿಟ್ಟು ಹೀಗೆ ಮಾಡುವುದು ಸರಿಯಲ್ಲ. 5 ವರ್ಷದ ತೆರಿಗೆ ಒಂದೇ ಬಾರಿಗೆ ಕಟ್ಟಿ ಎಂದರೆ ನಮಗೂ ಕಷ್ಟವಾಗುತ್ತದೆ. ನಾಲ್ಕು ಕಂತುಗಳಲ್ಲಿ ಕಟ್ಟುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.

1.59 ಕೋಟಿ ತೆರಿಗೆ ಬಾಕಿ ‘ನಮ್ಮ ಪುರಸಭೆಗೆ ಹಿಂದಿನ ಆರ್ಥಿಕ ವರ್ಷದಲ್ಲಿ ₹1.59 ಕೋಟಿ ತೆರಿಗೆ ಬಾಕಿ ಇದೆ. 2023-24 ನೇ ಸಾಲಿಗೆ ₹1.51 ಕೋಟಿ ಸಾವಿರ ತೆರಿಗೆ ಬೇಡಿಕೆ ಇದೆ. ಒಟ್ಟು 3.10 ಕೋಟಿ ಈ ವರ್ಷದಲ್ಲಿ ವಸೂಲಿ ಆಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಆರ್. ಸಂತೋಷ್ ತಿಳಿಸಿದರು. ಅಕ್ಟೋಬರ್ ತಿಂಗಳವರೆಗೂ ₹1.13 ಕೋಟಿ ವಸೂಲಿಯಾಗಿದೆ. ನವೆಂಬರ್ ತಿಂಗಳಿನಲ್ಲಿ ₹9.98 ಲಕ್ಷ ವಸೂಲಿಯಾಗಿದೆ. ₹1.87 ಕೋಟಿ  ಬಾಕಿ ಇದೆ. ಶೇ 39.64 ರಷ್ಟು ಮಾತ್ರ ವಸೂಲಿಯಾಗಿದೆ ಎಂದು ತಿಳಿಸಿದರು. ‘ಪ್ರತಿ ತಿಂಗಳು ಪುರಸಭೆ ನಿಧಿಯಲ್ಲಿ ₹6.85 ಲಕ್ಷ ವೇತನ ಕೊಡಬೇಕು ಬೀದಿದೀಪಗಳ ನಿರ್ವಹಣೆಗೆ ₹2.5 ಲಕ್ಷ ವಾಹನಗಳಿಗೆ ಇಂಧನ ತುಂಬಿಸುವುದಕ್ಕಾಗಿ ₹1.75 ಲಕ್ಷ ಆರೋಗ್ಯ ಶಾಖೆಗೆ ₹1.5 ಲಕ್ಷ ಕುಡಿಯುವ ನೀರಿನ ನಿರ್ವಹಣೆಗೆ ₹2.25 ಲಕ್ಷ ಕಚೇರಿಯ ನಿರ್ವಹಣೆಗಾಗಿ ₹2.75 ಲಕ್ಷ ಬೇಕು. ನಾವು ಶೇ 75 ರಷ್ಟು ವಸೂಲಿ ಮಾಡದಿದ್ದರೆ ನಮಗೆ ಬರುವ ಅನುದಾನ ಕಡಿತವಾಗುತ್ತದೆ. ತೆರಿಗೆ ವಸೂಲಿಯ ಕುರಿತು ಮೇಲಾಧಿಕಾರಿಗಳಿಂದ ಒತ್ತಡ ಬರುತ್ತಿದೆ. ಈಗಾಗಲೇ ವಾಣಿಜ್ಯ ಮಳಿಗೆಗಳಿಗೆ ಐದು ಬಾರಿ ನೋಟಿಸ್ ಗಳು ಜಾರಿ ಮಾಡಿದ್ದೇವೆ. ಆದರೂ ಪಾವತಿ ಮಾಡಿಲ್ಲ. ಅನಿವಾರ್ಯವಾಗಿ ಮಳಿಗೆಗಳ ಮುಂದೆ ಕಸದ ವಾಹನಗಳನ್ನು ನಿಲ್ಲಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.