ADVERTISEMENT

ದೇವನಹಳ್ಳಿ | ಗ್ರಾಮಸಭೆಗೆ ಅಧಿಕಾರಿಗಳ ಗೈರು: ಆಕ್ರೋಶ

ತಿಮ್ಮಹಳ್ಳಿ ಗ್ರಾಮಸ್ಥರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 7:55 IST
Last Updated 11 ಜನವರಿ 2024, 7:55 IST
ವಿಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 2023-24 ನೇ ಸಾಲಿನ ಮೊದಲ ಹಂತದ ಗ್ರಾಮಸಭೆಯಲ್ಲಿ ಅಧ್ಯಕ್ಷೆ ಸುಮಾದೇವಿಮಂಜುನಾಥ್ ಮಾತನಾಡಿದರು.
ವಿಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 2023-24 ನೇ ಸಾಲಿನ ಮೊದಲ ಹಂತದ ಗ್ರಾಮಸಭೆಯಲ್ಲಿ ಅಧ್ಯಕ್ಷೆ ಸುಮಾದೇವಿಮಂಜುನಾಥ್ ಮಾತನಾಡಿದರು.   

ವಿಜಯಪುರ(ದೇವನಹಳ್ಳಿ): ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಹಳ್ಳಿಯಲ್ಲಿ ಅಧ್ಯಕ್ಷೆ ಸುಮಾದೇವಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಗ್ರಾಮಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರುಹಾಜರಿಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಹಾರೋಹಳ್ಳಿ, ತಿಮ್ಮಹಳ್ಳಿ, ಚಿಕ್ಕನಹಳ್ಳಿ, ದೊಡ್ಡಮುದ್ದೇನಹಳ್ಳಿ, ಬುಳ್ಳಹಳ್ಳಿ ಗ್ರಾಮಗಳ ಸಾರ್ವಜನಿಕರು ಗ್ರಾಮಸಭೆಯಲ್ಲಿ ಸೇರಿದ್ದರು. ತಿಮ್ಮಹಳ್ಳಿ ಗ್ರಾಮದಲ್ಲಿ ಚರಂಡಿ ನೀರು ಹೊರಗೆ ಹೋಗಲು ಜಾಗವಿಲ್ಲ, ರಾಜಕಾಲುವೆ ಅಳತೆ ಮಾಡಿ, ಒತ್ತುವರಿ ತೆರವುಗೊಳಿಸಿ ರಾಜಕಾಲುವೆಯ ಮೂಲಕ ನೀರು ಕೆರೆಗೆ ಹರಿದುಹೋಗುವಂತೆ ಮಾಡಬೇಕು. ದಂಡಿಗಾನಹಳ್ಳಿಯವರೆಗೂ ರಸ್ತೆ ನಿರ್ಮಾಣವಾಗಬೇಕು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು, ನರೇಗಾ ಯೋಜನೆಯಡಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು.

ದೊಡ್ಡಮುದ್ದೇನಹಳ್ಳಿಯಲ್ಲಿ ಸಾರ್ವಜನಿಕ ಸ್ಮಶಾನವಿಲ್ಲ. ಈ ಕುರಿತು ನಾವು ಹಲವು ಬಾರಿ ಮನವಿ ಕೊಟ್ಟರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ. ಅಂಗನವಾಡಿ ಕೇಂದ್ರ ಸುಸಜ್ಜಿತವಾಗಿಲ್ಲ. ಶಾಲೆಯ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ಗ್ರಾಮಸಭೆಯಲ್ಲಿ ತಾಲ್ಲೂಕು ಮಟ್ಟದ ಯಾವುದೇ ಅಧಿಕಾರಿಗಳು ಬಂದಿಲ್ಲ. ಸಮಸ್ಯೆಗಳನ್ನು ನಾವು ಯಾರಿಗೆ ಹೇಳಬೇಕು? ಅನುಷ್ಟಾನಾಧಿಕಾರಿಗಳು ಇಲ್ಲದೆ ಹೋದರೆ, ನಮ್ಮ ಸಮಸ್ಯೆಗ ಇತ್ಯರ್ಥ ಪಡಿಸುವವರು ಯಾರು? ಈ ಯಾವ ಯಾವ ಇಲಾಖೆಯಿಂದ ಅನುಷ್ಟಾನಾಧಿಕಾರಿಗಳು ಬಂದಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಶಿವರಾಜ್ ಒತ್ತಾಯಿಸಿದರು.

ADVERTISEMENT

ಅಧಿಕಾರಿಗಳು ಸಭೆಗಳಲ್ಲಿ ಭಾಷಣಗಳಲ್ಲಿ ಹೇಳುತ್ತೀರಿ, ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಇಷ್ಟು ಮಾತ್ರಕ್ಕೆ ಗ್ರಾಮಸಭೆಗಳು ಏಕೆ ಮಾಡಬೇಕು? ಈ ಬಗ್ಗೆ ಶಾಸಕರಿಗೆ ದೂರು ಕೊಡುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನೋಹರ್ ಮಾತನಾಡಿ, ಸಾಕಷ್ಟು ಮನವಿ ಮಾಡಿದರೂ ಶಾಸಕರು ಸೇರಿದಂತೆ ತಾಲ್ಲೂಕು, ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳು ಬಂದಿಲ್ಲ. ಇಂತಹ ಸಮಯದಲ್ಲಿ ನಮ್ಮ ಪ್ರಯತ್ನಗಳು ವಿಫಲವಾಗುತ್ತವೆ ಎಂದರು.

ಗ್ರಾಮ ಪಂಚಾಯಿತಿ ಪಿಡಿಓ ಆರ್.ಜಿ.ಸೌಮ್ಯ ಅವರು ಗ್ರಾಮಸಭೆಯ ಮೂಲ ಉದ್ದೇಶವನ್ನು ಸಾರ್ವಜನಿಕರಿಗೆ ತಿಳಿಸಿದರು.

ಕೃಷಿ ಇಲಾಖೆಯ ಅಧಿಕಾರಿ ಶ್ವೇತಾ ಮಾತನಾಡಿ, ರೈತರು, ಕಡ್ಡಾಯವಾಗಿ ಎಫ್.ಐ.ಡಿ.ಸಂಖ್ಯೆ ಮಾಡಿಸಿಕೊಳ್ಳಬೇಕು. ಭವಿಷ್ಯದಲ್ಲಿ ಯಾವುದೇ ಇಲಾಖೆಯಿಂದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಇದು ಉಪಯೋಗವಾಗಲಿದೆ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾದೇವಿ ಮಂಜುನಾಥ್ ಮಾತನಾಡಿದರು.

ಗ್ರಾಮಸಭೆ ನೋಡಲ್ ಅಧಿಕಾರಿ ಬಿ.ವಿ.ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಶ್ರೀನಿವಾಸ್, ಆಂಜಿನಮ್ಮ, ಮಂಜುಳಮ್ಮ, ನರಸಮ್ಮ, ಎನ್.ಮಂಜುಳಮ್ಮ, ಟಿ.ಎಂ.ಹರೀಶ್, ಡಿ.ಎಂ.ಸತೀಶ್, ಎಸ್.ಮಂಜುಳಾ, ನಾಗಮ್ಮ, ಎಂ.ಶಂಕರ್ ಪಂಚಾಯಿತಿ ಕಾರ್ಯದರ್ಶಿ ರಾಜೇಶ್, ಕರವಸೂಲಿಗಾರ ಮುನಿಕೃಷ್ಣಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.