ADVERTISEMENT

ವಿಜಯಪುರ: ಬರ ಪರಿಹಾರ ಕಾಮಗಾರಿ ವಿಳಂಬ

ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳ ಗಮನ

​ಪ್ರಜಾವಾಣಿ ವಾರ್ತೆ
Published 12 ಮೇ 2020, 10:11 IST
Last Updated 12 ಮೇ 2020, 10:11 IST

ವಿಜಯಪುರ: ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿರುವ ಬೆನ್ನಲ್ಲೇ ಬರಗಾಲ ಕೂಡಾ ಬರಸಿಡಿಲಂತೆ ಬಂದಿದೆ. ಅತ್ತ ವೈರಸ್ ಹರಡದಂತೆ ನೋಡಿಕೊಳ್ಳಲು ಇಡೀ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದ್ದರೆ, ಇತ್ತ ಬರ ಪರಿಹಾರ ಕಾಮಗಾರಿಗಳಿಗೆ ಗ್ರಹಣ ಹಿಡಿದಿದೆ.

ಜಿಲ್ಲೆಯಲ್ಲಿ ದಾಖಲಾಗಿದ್ದ ಕೋವಿಡ್-19 ಪ್ರಕರಣಗಳಲ್ಲಿ ದಾಖಲಾಗಿದ್ದವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಸೋಂಕು ಹರಡುವ ಆತಂಕ ಜನರಿಂದ ದೂರವಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ ಇಲಾಖೆ ಸೇರಿದಂತೆ ಇಡೀ ಜಿಲ್ಲಾಡಳಿತ ಈ ಮಹಾಮಾರಿ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ, ಬರದಿಂದ ಗ್ರಾಮೀಣ ಭಾಗದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸುವವರು ಇಲ್ಲವಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ನೀರೂ ಇಲ್ಲ. ಕೂಲಿಯೂ ಇಲ್ಲ: ಹಳ್ಳಿಗಳಲ್ಲಿ ದಿನೇ ದಿನೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಏಳು ವರ್ಷಗಳಿಂದ ಸರಿಯಾಗಿ ಮಳೆಯಿಲ್ಲ, ಬೆಳೆಯಿಲ್ಲ. ಲಾಕ್‌ಡೌನ್‌ ಇರುವುದರಿಂದ ಕೂಲಿಯೂ ಇಲ್ಲ. ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ ಎಂಬುದು ಗ್ರಾಮೀಣ ಭಾಗದ ಜನರ ಅಳಲು. ಆದರೆ, ಜಿಲ್ಲಾಡಳಿತ ಮಾತ್ರ ಈ ಬಗ್ಗೆ ಜಾಣ ಮೌನ ತೋರುತ್ತಿದೆ ಎಂಬುದು ಜನರ ಬೇಸರ.

ADVERTISEMENT

ಮೇವಿಗೆ ಬರ ಕುಡಿಯುವ ನೀರಿನ ಜತೆಗೆ ಜಾನುವಾರುಗಳಿಗೆ ಮೇವಿಗೂ ಬರ ಎದುರಾಗಿದ್ದು, ಹಸಿರು ಮೇವಿಗಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನಲ್ಲಿ 36,749 ಹಸುಗಳು, 5,563 ಎಮ್ಮೆಗಳು,41,346 ಕುರಿಗಳು,15,765ಮೇಕೆಗಳು ಇವೆ. ಇವುಗಳಿಗೆ ಮೇವು ಒದಗಿಸುವುದು ದೊಡ್ಡ ಸವಾಲು. ಹಸಿರು ಮೇವು ಖರೀದಿಸಲು ಬರಲಿಕ್ಕಾಗಿ ನೆರೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರದ ಕಡೆಗೆ ಹೋಗುತ್ತಿದ್ದ ರೈತರ ಪಾಲಿಗೆ ಲಾಕ್ ಡೌನ್ ಕಂಟಕವಾಗಿ ಪರಿಣಮಿಸಿದೆ.

ಸ್ಥಳೀಯವಾಗಿ ಬೆಳೆದಿರುವ ಮೇವಿನ ಬೆಲೆಗಳು, ದುಬಾರಿಯಾಗುತ್ತಿವೆ. ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಬರಗಾಲ ಪೀಡಿತವಾದರೂ ರಾಜ್ಯ ಸರ್ಕಾರ ನಮ್ಮ ಕ್ಷೇತ್ರದ ಕಡೆಗೆ ಗಮನವನ್ನೆ ಹರಿಸಿಲ್ಲ. ರಸ್ತೆಗಳು ಹಾಳಾಗಿವೆ. ಕುಡಿಯುವ ನೀರಿಗೆ ಹಾಹಾಕಾರವಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಮೈತ್ರಿ ಸರ್ಕಾರದಲ್ಲಿ ಅನುಮೋದನೆಯಾಗಿದ್ದ ಅನುದಾನವನ್ನೂ ವಾಪಸ್‌ ತೆಗೆದುಕೊಂಡಿದ್ದಾರೆ. ಕುಡಿಯುವ ನೀರಿಗಾಗಿ ಕೇವಲ ₹ 50 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದಾರೆ. ಕೊಳವೆಬಾವಿಗಳು ಕೊರೆಯಲಾಗುತ್ತಿದೆ. ರಾಜಧಾನಿಯ ಪಕ್ಕದಲ್ಲಿದ್ದರೂ ನಮಗೆ ಅನುದಾನಕ್ಕಾಗಿ ಬೇಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.