ADVERTISEMENT

Ganesha Festival 2023: ಮೂರ್ತಿ ತಯಾರಿಕೆಗೆ ಮಣ್ಣಿನ ಕೊರತೆ

ಮಣ್ಣಿನ ಗಣಪತಿ ಮೂರ್ತಿಗೆ ಹೆಚ್ಚು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 4:11 IST
Last Updated 18 ಆಗಸ್ಟ್ 2023, 4:11 IST
ವಿಜಯಪುರ ಹೋಬಳಿಯ ದಂಡಿಗಾನಹಳ್ಳಿ ಬಳಿ ತಯಾರಾಗಿರುವ ಮಣ್ಣಿನ ಗಣಪನ ಮೂರ್ತಿಗಳು
ವಿಜಯಪುರ ಹೋಬಳಿಯ ದಂಡಿಗಾನಹಳ್ಳಿ ಬಳಿ ತಯಾರಾಗಿರುವ ಮಣ್ಣಿನ ಗಣಪನ ಮೂರ್ತಿಗಳು   

ವಿಜಯಪುರ(ದೇವನಹಳ್ಳಿ): ಗಣಪತಿ ಹಬ್ಬ ಆಚರಣೆಗೆ ಇನ್ನೊಂದು ತಿಂಗಳು ಬಾಕಿ ಇದ್ದು, ಮಣ್ಣಿನ ಗಣಪತಿಗಳ ಮೂರ್ತಿಗಳ ತಯಾರಿಕೆ ಜೋರಾಗಿ ನಡೆಯುತ್ತಿದೆ.

ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮೂರ್ತಿಗಳ ನಿಷೇಧ ಹಾಗೂ ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪನೆಗೆ ಜನ ಒಲವು ತೋರುತ್ತಿದ್ದು, ಮುಂಗಡವಾಗಿ ಮಣ್ಣಿನ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ.

ಬೇಡಿಕೆಗೆ ಅನುಗುಣವಾಗಿ ತಯಾರಕರು ಮಣ್ಣಿನ ಮೂರ್ತಿಗಳ ತಯಾರಿಕೆಗೆ ಹೆಚ್ಚು ನೀಡಿದ್ದಾರೆ. ಹೀಗಾಗಿ ಮೂರ್ತಿಗೆ ತಯಾರಿಕೆಗೆ ಬೇಕಾದ ಜೇಡಿಮಣ್ಣಿನ ಕೊರತೆ ಉಂಟಾಗಿದೆ.

ADVERTISEMENT

ಕಳೆದ ವರ್ಷ ಉತ್ತಮ ಮಳೆಯಾಗಿದ್ದ ಕಾರಣ, ಕೆರೆಗಳಲ್ಲಿ ನೀರು ತುಂಬಿಕೊಂಡು ಕೋಡಿ ಹರಿದಿದ್ದರಿಂದ ಈ ಬಾರಿ ಗಣಪತಿ ಮೂರ್ತಿಗಳ ತಯಾರಿಕೆಗೆ ಜೇಡಿಮಣ್ಣಿನ ಕೊರತೆ ಕಂಡುಬಂದಿದೆ.

ಹೊಸಕೋಟೆ, ಮಾಲೂರು, ಕೋಲಾರ ಮುಂತಾದ ಕಡೆಗಳಿಂದ ಜೇಡಿಮಣ್ಣು ತರಿಸಿಕೊಂಡು ತಯಾರಿಕೆ ಮಾಡಲಾಗುತ್ತಿದೆ. ಒಂದು ಲೋಡು ಟಿಪ್ಪರ್ ಜೇಡಿ ಮಣ್ಣು ₹6 ಸಾವಿರ, ಗಣಪತಿ ಮೂರ್ತಿಗಳ ಕೆಳಗೆ ಹಾಕುವ ಪೀಠಗಳಿಗೆ ಬಳಕೆ ಮಾಡುವ ಮರದ ಚಟ್ಟಗಳು, ಒಂದು ಟನ್ ₹9 ಸಾವಿರ, ನೀರಿನಲ್ಲಿ ಸುಲಭವಾಗಿ ಕರಗುವಂತಹ ಬಣ್ಣಗಳು ಬೆಂಗಳೂರಿನಲ್ಲಿ ಖರೀದಿಸಲಾಗುತ್ತಿದೆ.

ಕಲಾವಿದರು ಕಳೆದ 8 ತಿಂಗಳಿಂದಲೇ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದು, ಶಂಖಗಣಪ, ಕೃಷ್ಣಗಣಪ, ದರ್ಬಾರ್ ಸಿಂಹಾರೂಢ, ಗಜವಾಹನ, ಆಂಜನೇಯ, ನಾಗರಹಾವು, ಮಯೂರವಾಹನ, ಕಮಲಾರೂಢ, ನೃತ್ಯಪಟು, ವೀಣಾ, ಹಸುವಿನ ಮೇಲೆ ಕುಳಿತಿರುವ ಗಣಪ ಸೇರಿದಂತೆ ಹಲವು ಆಕಾರ ಮೂರ್ತಿಗಳನ್ನು ತಯಾರಿಸಲಾಗಿದೆ. ಇವುಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಒಂದು ಅಡಿಯಿಂದ ಹಿಡಿದು, 6 ಅಡಿಗಳವರೆಗೂ ಮೂರ್ತಿಗಳು ಸಿದ್ಧವಾಗುತ್ತಿವೆ. ₹150–3500 ವರೆಗೂ ಬೆಲೆ ನಿಗದಿ ಮಾಡಲಾಗುತ್ತಿದೆ.

ಬೇಡಿಕೆಗೆ ತಕ್ಕಂತೆ ಮೂರ್ತಿ ತಯಾರಿಸುತ್ತಿದ್ದೇವೆ. ಆದರೆ ಪಿಓಪಿ ಮೂರ್ತಿಗಳ ತಯಾರಿಕೆ ಆಗುತ್ತಿರುವುದು ಆತಂಕ ಮೂಡಿಸಿದೆ ಮಂಜುನಾಥ್ ಮೂರ್ತಿ ತಯಾರಕ

ಪಿಓಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದ ನಮ್ಮ ಶ್ರಮ ವ್ಯರ್ಥವಾಗಲಿದೆ ಜಿ.ರಾಜಗೋಪಾಲ್ ಮೂರ್ತಿ ತಯಾರಕ

ಗುಪ್ತವಾಗಿ ಪಿಓಪಿ ಮೂರ್ತಿ ತಯಾರಿಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪಿಓಪಿ ಗಣಪತಿ ಮೂರ್ತಿ ತಯಾರಿಕೆ ಮಾಡದಂತೆ ನಿರ್ಬಂಧ ವಿಧಿಸಿದೆ. ಆದರೂ ಕೆಲವು ಕೆಲವು ಕಡೆಗಳಲ್ಲಿ ಗುಪ್ತವಾಗಿ ಪಿಓಪಿ ಮೂರ್ತಿ ತಯಾರಿಸಲಾಗುತ್ತಿದೆ.  ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಲಾವಿದರು ಒತ್ತಾಯಿಸಿದರು. ಪಿಓಪಿ ಮೂರ್ತಿಗಳಿಂದ ಮಣ್ಣಿನಿಂದ ಮೂರ್ತಿಗಳಿಗೆ ಬೇಡಿಕೆ ಕಡಿಮೆಯಾಗಿ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಬಗ್ಗೆ ಗಮನಹರಿಸುವಂತೆ ಕಲಾವಿದರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.