ವಿಜಯಪುರ (ದೇವನಹಳ್ಳಿ): ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬ ಆಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಸೋಮವಾರ ಲೋಕಾಯುಕ್ತ ಅಧಿಕಾರಿ ಹಾಲಪ್ಪ ಬಾಲದಂಡಿ ನೇತೃತ್ವದ ತಂಡ ದಿಢೀರನೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಪಟ್ಟಣದಿಂದ ಕೋಲಾರ ರಸ್ತೆಗೆ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವಿಳಂಬ, ಧೂಳಿನಿಂದ ವಾಹನ ಸವಾರರಿಗೆ, ಪಾದಾಚಾರಿಗಳಿಗೆ ತೊಂದರೆ ಆಗುತ್ತಿದೆ. ಕಾಮಗಾರಿ ಆರಂಭ ದಿನದಿಂದ ಅಪಘಾತಗಳು ಸಹ ಸಂಭವಿಸುತ್ತಿದೆ. ಮಳೆ ಸುರಿದಾಗ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸ ಪಡುವಂತಾಗಿದೆ ಎಂಬ ದೂರು ನೀಡಲಾಗಿತು.
ದೂರಿಗೆ ಸಂಬಂಧಿಸಿದಂತೆ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿ ಹಾಲಪ್ಪ ಬಾಲದಂಡಿ, ಮಾಹಿತಿ ಸಂಗ್ರಹಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುರಕ್ಷಾ ಕ್ರಮ ಕೈಗೊಳ್ಳುವ ಮೂಲಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗೆ ಸೂಚನೆ ನೀಡಿದರು.
ಪುರಸಭೆ ಅಧಿಕಾರಿಗಳಾದ ಸತ್ಯನಾರಾಯಣ, ಶೇಖರ್, ಪೊಲೀಸರು ಹಾಜರಿದ್ದರು.
ಪಾದಾಚಾರಿ ಮಾರ್ಗದ ಮಳಿಗೆ ತೆರವಿಗೆ ಸೂಚನೆ
ಪಟ್ಟಣದಲ್ಲಿ ಜನದಟ್ಟಣೆ ಇರುವ ಕಡೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಪಾದಾಚಾರಿ ಮಾರ್ಗಗಳಲ್ಲಿ ತೆರೆದಿರುವ ಮಳಿಗೆಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ಲೋಕಾಯುಕ್ತರ ಗಮನಕ್ಕೆ ತಂದಾಗ ಇದೇ ವೇಳೆ ಪಟ್ಟಣದ ಗಾಂಧಿ ಚೌಕ ಹಳೆ ಸರ್ಕಾರಿ ಆಸ್ಪತ್ರೆ ಬಳಿ ಪಾದಾಚಾರಿ ಮಾರ್ಗವಾಗಿ ತೆರೆದಿರುವ ಮಳಿಗೆಗಳನ್ನು ವೀಕ್ಷಿಸಿದರು. ಪಾದಾಚಾರಿ ಮಾರ್ಗವಾಗಿ ತೆರೆದಿರುವ ಮಳಿಗೆಗಳನ್ನು ತೆರವುಗೊಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.