
ವಿಜಯಪುರ (ದೇವನಹಳ್ಳಿ): ಪಟ್ಟಣದ ಹೊರವಲಯದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಹಳೆ ಕಟ್ಟಡ ತ್ಯಾಜ್ಯ, ಅನುಪಯುಕ್ತ ವಸ್ತು, ಪ್ಲಾಸ್ಟಿಕ್ ತ್ಯಾಜ್ಯ ಸುರಿಯುವ ತಾಣವಾಗಿ ಮಾರ್ಪಟ್ಟಿದ್ದು, ರಸ್ತೆಯ ಇಕ್ಕೆಲಗಳು ಅಸಹ್ಯಕರವಾಗಿ ಕಾಣುತ್ತಿವೆ.
ಪಟ್ಟಣದಲ್ಲಿ ಹೊಸ ಹೊಸ ಮನೆ, ವಾಣಿಜ್ಯ ಮಳಿಗೆ ತಲೆ ಎತ್ತುತ್ತಿರುವುದು ಒಂದೆಡೆಯಾದರೆ, ಹಳೆ ಕಟ್ಟಡಗಳ ತ್ಯಾಜ್ಯವನ್ನು ಪ್ರಮುಖ ರಸ್ತೆಗಳ ಪಕ್ಕದಲ್ಲಿ ಸುರಿಯುವ ಚಾಳಿಯೂ ಹೆಚ್ಚಾಗಿದೆ. ಇದರ ಪರಿಣಾಮ ಸುತ್ತಲಿನ ಪರಿಸರ ಮಲಿನವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಕಟ್ಟಡ ತ್ಯಾಜ್ಯವನ್ನು ಟ್ರ್ಯಾಕ್ಟರ್, ಬೈಕ್ ಇತರೆ ವಾಹನ ಮೂಲಕ ತುಂಬಿಕೊಂಡು ಪಟ್ಟಣದ ಹೊರವಲಯದ ಪ್ರಮುಖ ರಸ್ತೆಗಳಲ್ಲಿ ಸುರಿಯಲಾಗುತ್ತಿದೆ.
ಚನ್ನರಾಯಪಟ್ಟಣ ಬೈಪಾಸ್ ರಸ್ತೆ, ಮಂಡಿಬೆಲೆ ರಸ್ತೆ, ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ವಿಜಯಪುರ ಅಮಾನಿಕೆರೆ ಏರಿ, ಶಿಡ್ಲಘಟ್ಟ ಕ್ರಾಸ್ ಮೂಲಕ ನಾಗರಬಾವಿ ರಸ್ತೆ, ಕೋಲಾರ ಮುಖ್ಯರಸ್ತೆ, ದೇವನಹಳ್ಳಿ ಮುಖ್ಯರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿಗಳು ಗೋಚರಿಸುತ್ತಿದ್ದು, ಇದಕ್ಕೆ ಪುರಸಭೆ ಅಧಿಕಾರಿಗಳು ಕಡಿವಾಣ ಹಾಕಬೇಕೆಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.
ಕ್ರಮ ಕೈಗೊಳ್ಳಲು ಒತ್ತಾಯ: ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿದು ಹೋಗುತ್ತಿರುವವನ್ನು ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪತ್ತೆ ಹಚ್ಚಿ, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪಟ್ಟಣದ ಸುತ್ತಲಿನ ರಸ್ತೆ ಮಾರ್ಗಗಳು ಸೌಂದರ್ಯ ಹಾಳಾಗುವ ಜೊತೆಗೆ ಜನರ ಆರೋಗ್ಯದ ಮೇಲೂ ಪರಿಣಾಮ ಬಿರುತ್ತದೆ ಎಂದು ಪರಿಸರ ಪ್ರೇಮಿ ವಿ.ಪ್ರಶಾಂತ್ ಹೇಳಿದ್ದಾರೆ.
ವಿಜಯಪುರ ಪಟ್ಟಣದ ಹೊರವಲಯದ ಪ್ರಮುಖ ರಸ್ತೆ ಬದಿಗಳಲ್ಲಿ ಅನುಪಯುಕ್ತ ತ್ಯಾಜ್ಯ ತಂದು ರಾಶಿ ಹಾಕಲಾಗುತ್ತಿದೆ. ಇದಕ್ಕೆ ಪುರಸಭೆ ಅಧಿಕಾರಿಗಳು ಕಡಿವಾಣ ಹಾಕಬೇಕುಕಿರಣ್, ವಿಜಯಪುರ ನಿವಾಸಿ
ವಾಹನ ದಟ್ಟನೆ ಇರುವ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಅಲ್ಲಿನ ಸುತ್ತಲಿನ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದಕ್ಕೆ ಈಗಲೇ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆಜಯರಾಂ ಹಾರ್ಡಿಪುರ ನಿವಾಸಿ
ನಾಯಿ ಕಾಟ ಹೆಚ್ಚಳ
ವಿಜಯಪುರ ಪಟ್ಟಣದ ಹೊರವಲಯದ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಆಹಾರಕ್ಕಾಗಿ ನಾಯಿಗಳು ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ. ಅಲ್ಲದೇ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕಿ ವಾಹನ ಅಪಘಾತಕ್ಕೂ ಕಾರಣವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.