ADVERTISEMENT

ವಿಜಯಪುರ: ಸಮಸ್ಯೆಗಳ ‘ಸಂತೆ’ ಇದು

ಮೂಲ ಸೌಕರ್ಯ ಕೊರತೆ । ವರ್ತಕರು–ಗ್ರಾಹಕರ ಗೋಳು । ಅನೈತಿಕ ಚಟುವಟಿಕೆ ತಾಣ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 1 ಜುಲೈ 2025, 6:13 IST
Last Updated 1 ಜುಲೈ 2025, 6:13 IST
ಇಕ್ಕಾಟ ಪ್ರದೇಶದಲ್ಲಿ ವಿಜಯಪುರ ಸಂತೆ 
ಇಕ್ಕಾಟ ಪ್ರದೇಶದಲ್ಲಿ ವಿಜಯಪುರ ಸಂತೆ    

ಕೆಂಪೇಗೌಡ ಎನ್ ವೆಂಕಟೇನಹಳ್ಳಿ

ವಿಜಯಪುರ (ದೇವನಹಳ್ಳಿ): ಇಕ್ಕಟ್ಟಾದ ಪ್ರದೇಶ, ಎಲ್ಲೆಂದರಲ್ಲಿ ಕಸದ ರಾಶಿ, ಮರೀಚಿಕೆಯಾದ ಸ್ವಚ್ಛತೆ, ಸುರಕ್ಷತೆ. ನೀರು, ಶೌಚಾಲಯ, ಸಂಚಾರ ಅವ್ಯವಸ್ಥೆ, ಊರಿಯದ ವಿದ್ಯುತ್ ದೀಪ, ವಾಹನ ನಿಲುಗಡೆ ಸಮಸ್ಯೆ, ಟ್ರಾಫಿಕ್ ಕಿರಿಕಿರಿ, ರಾತ್ರಿ ವೇಳೆ ಅನೈತಿಕ ಚಟುವಟಿಕೆ ತಾಣ...

ಇಷ್ಟೆಲ್ಲಾ ಅಧ್ವಾನಗಳ ದರ್ಶನವಾಗುವುದು ವಿಜಯಪುರ ಸಂತೆಯಲ್ಲಿ.

ADVERTISEMENT

ಪುರಸಭೆ ಕೇಂದ್ರ ವಿಜಯಪುರದಲ್ಲಿ ಪ್ರತಿ ಶುಕ್ರವಾರ ವಾರದ ಸಂತೆ ನಡೆಯುತ್ತದೆ. ನಸುಕಿನಲ್ಲಿ ಆರಂಭವಾಗುವ ಸಂತೆ ಸಂಜೆಯನ್ನೂ ದಾಟುತ್ತದೆ.  ಸಂತೆಯ ದಿನ ವ್ಯಾಪಾರಿಗಳು ಸುಮಾರು 180 ಮಳಿಗೆಗಳನ್ನು ತೆರೆಯುತ್ತಾರೆ. ದಿನಸಿಗಳು, ಗೃಹಬಳಕೆ ವಸ್ತುಗಳು, ಯಂತ್ರೋಪಕರಣಗಳು, ಸೊಪ್ಪು, ಹಣ್ಣು, ತರಕಾರಿ, ನಾಟಿ ಕೋಳಿ ಸೇರಿದಂತೆ ನಿತ್ಯ ಬಳಕೆಯ ಎಲ್ಲ ವಸ್ತುಗಳು ಮಾರಾಟವಾಗುತ್ತದೆ. ಹೀಗೆ ಪಟ್ಟಣದ ಪ್ರಮುಖ ವ್ಯಾಪಾರಿ ಸ್ಥಳ ಎನಿಸಿರುವ ವಾರದ ಸಂತೆ ನಡೆಯುವ ಸ್ಥಳವು ಮೂಲ ಸೌಲಭ್ಯ ಕೊರತೆಯಿಂದ ಬಳಲುತ್ತಿದೆ.

ಸಂತೆಗೆ ವಿಜಯಪುರ ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರಷ್ಟೇ ಬರುವುದಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ದೇವನಹಳ್ಳಿ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧೆಡೆಗಳಿಂದ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರು ಬರುತ್ತಾರೆ. ಆದರೆ ಸಂತೆ ನಡೆಯುವ ಜಾಗದಲ್ಲಿ ಸೌಕರ್ಯ ಇಲ್ಲದೆ ವರ್ತಕರು ಹಾಗೂ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ವ್ಯಾಪಾರಿಗಳ ಸಂಕಷ್ಟ: ಪುರಸಭೆಯು ಸಂತೆ ಜಾಗದಲ್ಲಿ ಎಲ್ಲ ವ್ಯಾಪಾರಿಗಳಿಗೆ ಅನುಕೂಲದ ವಾತಾವರಣ ನಿರ್ಮಿಸಿಲ್ಲ. ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಒಂದಷ್ಟು ಜಾಗಕ್ಕೆ ಪ್ರಾಂಗಣವನ್ನು ನಿರ್ಮಿಸಿದರೂ ಅದಕ್ಕೆ ಪೂರಕ ಸೌಲಭ್ಯಗಳಿಲ್ಲ. ಮಳಿಗೆಯವರ ಸಂಕಷ್ಟ ಹೇಳತೀರದು. ಮಳೆಗಾಲದಲ್ಲಿ ವ್ಯಾಪಾರ ಮಾಡಲು ಸಂಕಷ್ಟ ಪಡುವಂತಾಗಿದೆ.

ಸಂಚಾರ ಕಿರಿಕಿರಿ: ಇಕ್ಕಾಟದ ಪ್ರದೇಶದಲ್ಲಿಯೇ ನೂರಾರು ಮಳಿಗೆಗಳನ್ನು ತೆರೆಯುವುದರಿಂದ ಸೊಪ್ಪು, ಹಣ್ಣು, ತರಕಾರಿ ಇತರೆ ಕೃಷಿ ಉತ್ಪನ್ನಗಳನ್ನು ಸಂತೆಯೊಳಗೆ ತಂದು ಮಾರಾಟ ಮಾಡಲು ರೈತರು ಹರಸಾಹಸಪಡುವರು. ಮಧ್ಯಾಹ್ನದ ಹೊತ್ತಿಗೆ ಹೆಚ್ಚಾಗುವ ಜನಸಂದಣಿಗೆ ಗ್ರಾಹಕರು ವಸ್ತುಗಳನ್ನು ಖರೀದಿಸಲು ಕಿರಿಕಿರಿ ಅನುಭವಿಸಬೇಕಾಗಿದೆ.

ಸ್ವಚ್ಛತೆ ಮರೀಚಿಕೆ: ಸಂತೆಯೊಳಗೆ ಅಂಗನವಾಡಿ ಕೇಂದ್ರ, ವೇಣುಗೋಪಾಲಸ್ವಾಮಿ, ಅಯ್ಯಪ್ಪ, ಶನಿಮಹಾತ್ಮ ಸ್ವಾಮಿ ದೇವಾಲಯವೂ ಇದೆ. ಆದರೆ ಎಲ್ಲೆಂದರಲ್ಲಿ ಕಾಣುವ ಕಸದ ರಾಶಿ ಅಸಹ್ಯದ ವಾತಾವರಣ ಮೂಡಿಸುತ್ತದೆ. ಸಂತೆ ಮುಗಿದ ಮೂರ್ನಾಲ್ಕು ದಿನವಾದರೂ ಕಸದ ರಾಶಿ ತೆರವುಗೊಳಿಸುವುದಿಲ್ಲ. ಊಗುಳುವುದು, ಸ್ಥಳೀಯರಿಂದ ತ್ಯಾಜ್ಯ ಎಸೆಯುವುದು ಸಾಮಾನ್ಯವಾಗಿದೆ.

ಕುಡುಕರ ತಾಣ: ಸಂತೆ ಒಂದು ದಿನ ನಡೆದರೆ ಉಳಿದ ದಿನಗಳಲ್ಲಿ ಕುಡುಕರ ತಾಣವಾಗಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲು, ಪ್ಯಾಗಳು, ಪ್ಲಾಸ್ಟಿಕ್ ಲೋಟಗಳು ರಾರಾಜಿಸುತ್ತದೆ. ಶೌಚಾಲಯಕ್ಕೆ ಬೀಗ ಹಾಕಿರುವ ಪರಿಣಾಮ ಸಂತೆಯ ಬಯಲನ್ನೇ ಬಹಿರ್ದೆಸೆಯ ತಾಣವನ್ನಾಗಿ ಮಾಡಿಕೊಂಡಿದ್ದಾರೆ.

ಊರಿಯದ ದೀಪಗಳು: ಸಂತೆಯ ಪ್ರಾಂಗಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿಲ್ಲ. ದೀಪದ ವ್ಯವಸ್ಥೆ ಇಲ್ಲದ ಕಾರಣ ವ್ಯಾಪಾರಿಗಳೇ ಎಲ್‌ಇಡಿ ಬಲ್ಪಗಳನ್ನು ಅಳವಡಿಸಿಕೊಂಡು ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಕತ್ತಲೆಯಲ್ಲಿ ಇಟ್ಟ ಮಳಿಗೆಯತ್ತ ಗ್ರಾಹಕರು ಸುಳಿಯುವುದಿಲ್ಲ.
ಸಂತೆ ನಡೆಯುವ ವೇಳೆ ಮಳೆ ಬಂದರೆ ತುಂಬಾ ತೊಂದರೆಯಾಗುತ್ತದೆ. ದಿನಸಿ, ತರಕಾರಿ ಇತರೆ ವಸ್ತುಗಳು ಎಲ್ಲ ಹಾಳಾಗುತ್ತದೆ. ಮಳೆ ಸುರಿದಾಗ ವ್ಯಾಪಾರಿಗಳು, ಗ್ರಾಹಕರು ನಿಲ್ಲಲು ಜಾಗವಿರುವುದಿಲ್ಲ. ಓಡಾಡಲು ಕಷ್ಟವಾಗುತ್ತದೆ. ಸಂತೆಯ ಎಲ್ಲ ವ್ಯಾಪರಸ್ಥರಿಗೆ ಪ್ರಾಂಗಣ ಸಾಲುತ್ತಿಲ್ಲದ ಕಾರಣ ಕೆಲವು ವ್ಯಾಪಾರಸ್ಥರು ಬಿಸಿಲಿನಲ್ಲಿ ಹಾಗೂ ಮಳೆ ಗಾಳಿ ಲೆಕ್ಕಿಸದೇ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ತರಕಾರಿ ವ್ಯಾಪಾರಿ ನಾಗರಾಜ್ ದೂರುತ್ತಾರೆ.

ಪುರಸಭೆ ನಿರ್ಲಕ್ಷ್ಯ: ವರ್ಷಕ್ಕೊಮ್ಮೆ ಸಂತೆ ಸುಂಕ ಹರಾಜು ಮಾಡಲಾಗುತ್ತದೆ. ಆದರೆ ಸಮರ್ಪಕ ಸೌಲಭ್ಯಗಳಿಲ್ಲ. ಕುಡಿಯುವ ನೀರು, ಶೌಚಾಲಯ, ಬೀದಿ ದೀಪ ವ್ಯವಸ್ಥೆ ಇಲ್ಲ. ಸಮಯಕ್ಕೆ ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಕುಡುಕರ ಹಾವಳಿ ಹೆಚ್ಚಾಗಿದೆ. ಗ್ರಾಹಕರು, ವ್ಯಾಪಾರಿಗಳಿಗೆ ಸುರಕ್ಷತೆ ಇಲ್ಲವಾಗಿದೆ.  ಇದಕ್ಕೆಲ್ಲ ಪುರಸಭೆಯ ಆಡಳಿತ ನಿರ್ಲಕ್ಷ್ಯ ಕಾರಣ ಎನ್ನುತ್ತಾರೆ ಇಲ್ಲಿನ ನಾಗರಿಕರು.

ಎಲ್ಲೆಂದರಲ್ಲಿ ರಾಶಿ
ಸಂತೆಯ ಮುಖ್ಯದ್ವಾರ
ಶೌಚಾಲಯಕ್ಕೆ ಬೀಗ
ದಿಮ್ಮಿ ತೆರವು ಗೊಳಿಸುವವರ‍್ಯಾರು
ಇದು ಕುಡುಕರ ತಾಣವಲ್ಲ ವಿಜಯಪುರ ಸಂತೆ

ಮಳೆಗಾಲದಲ್ಲಿ ಸಮಸ್ಯೆ

ಪ್ರತಿ ಶುಕ್ರವಾರ ಬೆಳಗ್ಗೆ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂತೆ ನಡೆಯುತ್ತದೆ. ಆದರೆ ಇಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ವ್ಯಾಪಾರಿಗಳಿಗೆ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಾಗಿರುತ್ತದೆ. ಪುರಸಭೆ ಇತ್ತ ಗಮನಹರಿಸಿ ಸೌಲಭ್ಯ ಕಲ್ಪಿಸಬೇಕು.
ಮಣಿ ನಿಂಬೆ ಹಣ್ಣಿನ ವ್ಯಾಪಾರಿ

\

ಕಳ್ಳರ ಕಾಟ

ಕಳೆದ ವಾರ ಸಂತೆಯ ಹೊರಗಡೆ ಸೈಕಲ್ ನಿಲ್ಲಿಸಿ ತರಕಾರಿ ದಿನಸಿ ತರುವಷ್ಟರಲ್ಲಿ ಸೈಕಲ್ ಕಳವು ಆಗಿದೆ. ಮೊಬೈಲ್ ದ್ವಿಚಕ್ರ ವಾಹನ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಪುರಸಭೆ ಪೊಲೀಸ್ ಇಲಾಖೆ ಜನಸಂದಣಿ ಸೇರುವ ಕಡೆ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
ರಾಜು ಚಿಕ್ಕನಹಳ್ಳಿ ನಿವಾಸಿ

ಸಿಸಿಟಿವಿ ಕ್ಯಾಮೆರಾ ಅಳವಡಿಸಿ 

ಸಂತೆಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಇದು ನಿಲ್ಲಬೇಕಾದರೆ ಪುರಸಭೆಯವರು ಸಂತೆಯ ಎರಡು ಮುಖ್ಯದ್ವಾರಗಳಿಗೆ ಗೇಟ್ ನಿರ್ಮಿಸಿ ವಿದ್ಯುತ್ ದೀಪಗಳು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಿ. ಪ್ರದೀಪ್ ಸ್ಥಳೀಯ ನಿವಾಸಿ. ಶೀಘ್ರ ಪರಿಹಾರ ಶುಕ್ರವಾರ ಸಂತೆಯಲ್ಲಿ ಮೂಲಸೌಲಭ್ಯಗಳ ಕೊರತೆಯ ಬಗ್ಗೆ ಗಮನಕ್ಕೆ ಬಂದಿದೆ. ಪುರಸಭೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ವ್ಯಾಪಾರಿಗಳು ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.
ಭವ್ಯಾ ಮಹೇಶ್ ಪುರಸಭೆ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.