ಆನೇಕಲ್: ತಾಲ್ಲೂಕಿನ ಸರ್ಜಾಪುರದಲ್ಲಿ ಗುರವಾರ ನಡೆದ ಗ್ರಾಮಸಭೆಗೆ ಗೈರಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ನೀಡಲು ಪಂಚಾಯಿತಿ ತೀರ್ಮಾನಿಸಿದೆ.
ಗ್ರಾಮ ಸಭೆಯಲ್ಲಿ 11ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಅಬಕಾರಿ, ಆಹಾರ, ಲೋಕೋಪಯೋಗಿ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಗ್ರಾಮಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ನಿರ್ಧಾರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ ಮೂರ್ತಿ ಕುಮಾರ್, ಸಾರ್ವಜನಿಕರು ಕುಂದುಕೊರತೆಗಳನ್ನು ನೇರವಾಗಿ ಸಾರ್ವಜನಿಕರಿಗೆ ತಿಳಿಸಲು ಗ್ರಾಮಸಭೆ ರೂಪಿಸಲಾಗಿದೆ. ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಸ್ಥಳೀಯ ಸಮಸ್ಯೆಗಳ ಬಗ್ಗೆ ತಿಳಿಯಲು ಉಪಯುಕ್ತವಾಗುತ್ತದೆ. ಆದರೆ ಹಲವು ಅಧಿಕಾರಿಗಳು ಗ್ರಾಮಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಪ್ರತಿ ಗ್ರಾಮಸಭೆಗಳಲ್ಲಿಯೂ ಈ ಸಮಸ್ಯೆ ಸಾಮಾನ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಗ್ರಾಮಸಭೆ ಆಯೋಜಿಸಲಾಗಿದೆ. ಸರ್ಕಾರದ ದೂರದೃಷ್ಠಿ ಕಾರ್ಯಕ್ರಮಗಳನ್ನು ಅಧಿಕಾರಿಗಳು ಗೈರಾಗುವ ಮೂಲಕ ಹಳ್ಳಿ ಹಿಡಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಗ್ರಾಮಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ಸರ್ಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಲಾಗುವುದು. ರಸ್ತೆ, ಒಳಚರಂಡಿ, ಬೀದಿ ದೀಪ, ಸುಸಜ್ಜಿತ ಸರ್ಕಾರಿ ಶಾಲೆ ಆಸ್ಪತ್ರೆಗೆ ಆದ್ಯತೆ ನೀಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್ ಸರ್ಜಾ, ಸಾರ್ವಜನಿಕರು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾನಗರದ ನಿವಾಸಿಗಳೂ ಮೂಲಸೌಲಭ್ಯ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿದ್ದಾರೆ. ಅವರಿಗೆ ಅವಶ್ಯಕವಿರುವ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ಶ್ರೀನಿವಾಸ್ ಬುಡಗಪ್ಪ, ಸುನೀತಾ, ಮಮತಾ, ಸತೀಶ್, ಅರವಿಂದ್ ರೆಡ್ಡಿ, ಗಣೇಶ್, ರೇಣುಕಾ, ಶ್ವೇತಾ ಕುಮಾರಿ, ವೀಣಾ, ಲಲಿತಮ್ಮ, ಅನಿಲ್, ಸರಸ್ವತಿ, ಗಾಯತ್ರಿ, ಪ್ರಸಾದ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುಬಾನ್ ಖಾನ್, ಕಾರ್ಯದರ್ಶಿ ನಂಜಾರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.