ADVERTISEMENT

ವಿಷ ಕೊಡುತ್ತಿದ್ದಿರಾ, ನಿಮಗೆ ಸಿಹಿ ನೀಡುತ್ತೇವೆ: ಗ್ರಾಮಸ್ಥರ ವಿನೂತನ ಹೋರಾಟ

ದೊಡ್ಡ ತುಮಕೂರು: ಕೆರೆ ಉಳಿವಿಗಾಗಿ ಗ್ರಾಮಸ್ಥರ ವಿನೂತನ ಹೋರಾಟ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 7:41 IST
Last Updated 14 ಫೆಬ್ರುವರಿ 2022, 7:41 IST
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ತುಮಕೂರಿನಲ್ಲಿ ಕೆರೆಯ ಉಳಿವಿಗಾಗಿ ರೂಪಿಸಬೇಕಾದ ಹೋರಾಟದ ರೂಪುರೇಷೆಗಳ ಸಭೆ ಭಾನುವಾರ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ತುಮಕೂರಿನಲ್ಲಿ ಕೆರೆಯ ಉಳಿವಿಗಾಗಿ ರೂಪಿಸಬೇಕಾದ ಹೋರಾಟದ ರೂಪುರೇಷೆಗಳ ಸಭೆ ಭಾನುವಾರ ನಡೆಯಿತು   

ದೊಡ್ಡಬಳ್ಳಾಪುರ: ‘ನಮಗೆ ವಿಷ ಕೊಡುತ್ತಿದ್ದಿರಾ-ನಿಮಗೆ ಸಿಹಿ ನೀಡುತ್ತೇವೆ...’ ಹೀಗೆಂದು ದೊಡ್ಡತುಮಕೂರಿನ ಗ್ರಾಮಸ್ಥರು ಹೇಳಿ, ಕೆರೆಗಳ ಉಳಿವಿಗಾಗಿ ವಿನೂತನ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ನಗರಸಭೆ ಕಚೇರಿಗಳ ಮುಂದೆ ಭಜನೆ ಮಾಡಿ, ಹೋರಾಟದ ಹಾಡುಗಳನ್ನೂ ಹಾಡಲಾಗುತ್ತದೆ. ಕಚೇರಿಯ ಅಧಿಕಾರಿಗಳೂ ಸೇರಿದಂತೆ ಸಿಬ್ಬಂದಿಗೆ ಸಿಹಿಯನ್ನು ಹಂಚಲಾಗುತ್ತದೆ.

‘ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ನಗರಸಭೆಯ ತ್ಯಾಜ್ಯ ನೀರಿನಿಂದ ದೊಡ್ಡತುಮಕೂರು, ಚಿಕ್ಕತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮದ ಕೆರೆಗಳು ಸೇರಿದಂತೆ ಮದುರೆ ಹೋಬಳಿ ಕೆರೆಗಳು ಕಲುಷಿತವಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ದಿಸೆಯಲ್ಲಿ ‘ನಮಗೆ ವಿಷ ಕೊಡುತ್ತಿದ್ದಿರಾ-ನಿಮಗೆ ಸಿಹಿ ನೀಡುತ್ತೇವೆ’ ಎಂದು ಹೇಳುವ ಮೂಲಕ ಹೋರಾಟವನ್ನು ವಿನೂತನವಾಗಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ದೊಡ್ಡತುಮಕೂರು ಗ್ರಾಮಸ್ಥರು ತಿಳಿಸಿದರು.

‘ದೊಡ್ಡತುಮಕೂರು ಕೆರೆ ನೀರನ್ನು ಪರೀಕ್ಷಿಸಿದಾಗ ಹೆಚ್ಚಿನ ರಾಸಾಯನಿಕ ಅಂಶಗಳು ಕಂಡು ಬಂದಿದ್ದು, ಯಾವುದೇ ಜೀವಿಗಳು ಉಪಯೋಗಿಸಲು ಸಾಧ್ಯವಿಲ್ಲ ಎಂದು ವರದಿಗಳು ತಿಳಿಸಿವೆ. ಈ ದಿಸೆಯಲ್ಲಿ ತ್ಯಾಜ್ಯ ನೀರು ಸಂಸ್ಕರಿಸದೇ ಕೆರೆಗೆ ಹರಿಬಿಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳು, ಶಾಸಕರು, ನಗರಸಭೆ ಅಧಿಕಾರಿಗಳು, ತಾಂತ್ರಿಕ ತಜ್ಞರನ್ನೊಳಗೊಂಡ ಸಭೆಯನ್ನು ಶೀಘ್ರದಲ್ಲಿಯೇ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಆದರೆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೆರೆಯ ಉಳಿವಿಗಾಗಿ ಅರ್ಕಾವತಿ ನದಿಯ ಉಳಿವಿಗಾಗಿ ನೀರನ್ನು ಶುದ್ಧೀಕರಣ ಮಾಡಿಬಿಡಿ ಎನ್ನುವ ಒತ್ತಾಯ ನಮ್ಮದಾಗಿದೆ. ನಮ್ಮ ಹೋರಾಟಕ್ಕೆ ಗ್ರಾಮಸ್ಥರು ಸಜ್ಜಾಗುತ್ತಿದ್ದಾರೆ’ ಎಂದು ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಕೆರೆ ಸಂರಕ್ಷಣಾ ವೇದಿಕೆ ಅಧ್ಯಕ್ಷ ಹಾಗೂ ವೈದ್ಯ ಡಾ.ಟಿ.ಎಚ್.ಆಂಜಿನಪ್ಪ ಹೇಳಿದರು.

ADVERTISEMENT

ನಮಗೆ ವಿಷ ಕೊಡುತ್ತಿದ್ದಿರಾ -ನಿಮಗೆ ಸಿಹಿ ನೀಡುತ್ತೇವೆ: ಭಾನುವಾರ ದೊಡ್ಡತುಮಕೂರು ಗ್ರಾಮದಲ್ಲಿ ಕೆರೆ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಮುಂದಿನ ಹೋರಾಟವನ್ನು ಶಾಂತವಾಗಿ ದೀರ್ಘವಾಗಿ ಗೆಲ್ಲುವವರೆಗೂ ಹೋರಾಟ ನಿಲ್ಲಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಗ್ರಾಮಸ್ಥರು ಬಂದರು.

‘ಫೆ.22 ರಿಂದ ಪ್ರತಿ ಮಂಗಳವಾರದಂದು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ, ಕೈಗಾರಿಕೆಗಳ ಸಂಘ, ದೊಡ್ಡಬಳ್ಳಾಪುರ ನಗರಸಭೆ ಕಚೇರಿಗಳ ಮುಂದೆ ಭಜನೆ ಹಾಗೂ ಹೋರಾಟದ ಹಾಡುಗಳನ್ನು ಹಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೌಕರರಿಗೆ ಸಿಹಿ ಹಂಚುತ್ತೇವೆ. ನೀವು ನಮಗೆ ವಿಷವನ್ನು ಕೊಡುತ್ತಿದ್ದೀರಾ ನಾವು ನಿಮಗೆ ಸಿಹಿಯನ್ನು ಕೊಡುತ್ತಿದ್ದೇವೆ. ಮುಂದಿನ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೆರೆಯ ಉಳಿವಿಗಾಗಿ ಅರ್ಕಾವತಿ ನದಿಯ ಉಳಿವಿಗಾಗಿ ನೀರನ್ನು ಶುದ್ಧೀಕರಣ ಮಾಡಿದ ನಂತರವೇ ಹೊರಗೆ ಹರಿದು ಬಿಡಿ’ ಎನ್ನುವ ಹೋರಾಟವನ್ನು ಮುಂದುವರಿಸಲು ಗ್ರಾಮಸ್ಥರು ಭಾನುವಾರ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.