ADVERTISEMENT

ಜ್ಞಾನದ ಬೆಳಕು ನೀಡಿದ ವಿವೇಕಾನಂದ: ಶಿಕ್ಷಣ ತಜ್ಞ ಶರಣಪ್ಪ ಕಂಬಳಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:15 IST
Last Updated 26 ಜನವರಿ 2023, 5:15 IST
ಸೂಲಿಬೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಸೂಲಿಬೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು   

ಸೂಲಿಬೆಲೆ (ಹೊಸಕೋಟೆ): ‘ಸನಾತನ ಹಿಂದೂ ಧರ್ಮವನ್ನು ವಿದೇಶಗಳಲ್ಲೂ ಪಸರಿಸಲು ದೇಶ ಪರ್ಯಟನೆ ಮಾಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಜ್ಞಾನದ ಬೆಳಕು ನೀಡಿದ್ದಾರೆ’ ಎಂದು ಶಿಕ್ಷಣ ತಜ್ಞ ಶರಣಪ್ಪ ಕಂಬಳಿ ಹೇಳಿದರು.

ತಾಲ್ಲೂಕಿನ ಸೂಲಿಬೆಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಾಡಪ್ರಭು ಕೆಂಪೇಗೌಡ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಹಾಗೂ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು
ಮಾತನಾಡಿದರು.

ವಸತಿ ಶಾಲೆಯ ಪ್ರಾಚಾರ್ಯ ಬಸವರಾಜ್‌ ಮಾತನಾಡಿ, ಹಿಂದೂ ಧರ್ಮವನ್ನು ಪರಿವರ್ತಿಸಿ ವೇದಾಂತ ಸಿದ್ಧಾಂತವನ್ನು ಪಶ್ಚಿಮಕ್ಕೆ ತಂದ ಮಹಾನ್‌ ವ್ಯಕ್ತಿಯ ಜಯಂತಿ ಆಚರಣೆ ಮಾಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ವಿವೇಕಾನಂದರ ಸ್ಮರಿಸೋಣ; ವಿವೇಕಾನಂದರನ್ನು ಅನುಸರಿಸೋಣ, ವಿವೇಕ ಮತ್ತು ಆನಂದ ಎರಡನ್ನೂ ಒಮ್ಮೆಯೇ ಪಡೆಯೋಣ ಎಂದು ಹೇಳಿದರು.

ADVERTISEMENT

ಜೇನುಗೂಡು ಟ್ರಸ್ಟ್ ನಿರ್ದೇಶಕ ದೇವಿದಾಸ್‌ ಸುಬ್ರಾಯ್‌ ಶೇಠ್‌ ಮಾತನಾಡಿ, ವಿವೇಕಾನಂದರ ಆಲೋಚನೆಗಳು ನಮ್ಮನ್ನು ರೂಪಿಸುತ್ತವೆ. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳಾಗಬೇಕು ಎಂದು
ಹೇಳಿದರು.

ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ಅಧ್ಯಕ್ಷ ಬಿ.ಎಂ. ಸಾಗರ್‌ ಮಾತನಾಡಿ, ವೀರ ಸನ್ಯಾಸಿಯು ಯುವಕರ ಬಾಳಿನ ಆಶಾಕಿರಣ. ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಆಳವಡಿಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ ಮಾತನಾಡಿ, ಯುವಕ ಮತ್ತು ಯುವತಿಯರು ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಮನೆಗಳಲ್ಲೂ ಇಟ್ಟುಕೊಂಡು ಸ್ಫೂರ್ತಿ ಪಡೆಯಬೇಕು. ಕಠಿಣ ಪರಿಶ್ರಮದಿಂದ ಮಾತ್ರ ಜೀವನ ಸಾಕ್ಷಾತ್ಕಾರವಾಗಲು ಸಾಧ್ಯ. ಶಿಕ್ಷಣದಿಂದ ಮಾತ್ರ ಸಾಧಕರಾಗಬಹುದು ಎಂದು ಕರೆ ನೀಡಿದರು.

ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಬಹುಮಾನ ವಿತರಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಎಂ.ಆರ್‌. ಉಮೇಶ್, ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಸ್ಟುಡಿಯೊ ಆನಂದ್, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಪ್ರೇಮಕುಮಾರ್, ನಿರ್ದೇಶಕ ಸೈಯದ್‌ ಮಹಬೂಬ್, ಶಿಕ್ಷಕರಾದ ಸಂತೋಷ್, ರುತ್‌ ಜೆಸ್ಸೆಂತಾ, ಲಕ್ಷ್ಮೀ, ಕಾಶಿಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.