ADVERTISEMENT

ಬೊಮ್ಮವಾರ: ವಿಎಸ್‌ಎಸ್‌ಎನ್‌ ಸಭೆ

ಸಾಲ ಸೌಲಭ್ಯ ಸದ್ಬಳಕೆ: ಸದಸ್ಯರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 1:57 IST
Last Updated 11 ಡಿಸೆಂಬರ್ 2021, 1:57 IST
ದೇವನಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯ ಬೊಮ್ಮವಾರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ ವಿಎಸ್‌ಎಸ್ಎನ್‌ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎನ್. ರಾಮಮೂರ್ತಿ ಮಾತನಾಡಿದರು
ದೇವನಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯ ಬೊಮ್ಮವಾರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ ವಿಎಸ್‌ಎಸ್ಎನ್‌ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎನ್. ರಾಮಮೂರ್ತಿ ಮಾತನಾಡಿದರು   

ದೇವನಹಳ್ಳಿ:ಸಹಕಾರ ಸಂಘಗಳಲ್ಲಿ ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಡಿಸಿಸಿ ಬ್ಯಾಂಕ್ ವೃತ್ತಿಪರ ನಿರ್ದೇಶಕ ಕೆ. ರಮೇಶ್ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಬೊಮ್ಮವಾರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಗುರುವಾರ ನಡೆದ 2020-21ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ. ಬೊಮ್ಮವಾರ ಸಹಕಾರ ಸಂಘವು ₹ 2.41 ಕೋಟಿ ಸಾಲ ನೀಡಿದೆ. ಮುಂದಿನ ದಿನಗಳಲ್ಲಿ ₹ 4 ಕೋಟಿಗೂ ಹೆಚ್ಚು ಸಾಲ ನೀಡುವಂತೆ ಆಗಬೇಕು ಎಂದು ಸಲಹೆ ನೀಡಿದರು.

ADVERTISEMENT

ವಿಧಾನ ಪರಿಷತ್ ಚುನಾವಣೆ ನೀತಿಸಂಹಿತೆ ಇರುವುದರಿಂದ ರೈತರಿಗೆ ತಾತ್ಕಾಲಿಕವಾಗಿ ಸಾಲ ನೀಡುವುದನ್ನು ನಿಲ್ಲಿಸಲಾಗಿದೆ. ಡಿ. 16ರ ನಂತರ ರೈತರ ಸಾಲ ಮಂಜೂರಾತಿಗೆ ಕ್ರಮವಹಿಸಲಾಗುವುದು. ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಹೇಳಿದರು.

ತಾಲ್ಲೂಕು ಸೊಸೈಟಿ ನಿರ್ದೇಶಕ ಕೋಡಿಮಂಚೇನಹಳ್ಳಿ ಎಸ್. ನಾಗೇಶ್ ಮಾತನಾಡಿ, ರೈತರು ಹಾಗೂ ಮಹಿಳಾ ಸಂಘದ ಪ್ರತಿನಿಧಿಗಳು ಸಹಕಾರ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಬ್ಯಾಂಕ್‌ನಿಂದ ಪಡೆದಿರುವ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರ ಕ್ಷೇತ್ರಕ್ಕೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಬೊಮ್ಮವಾರ ವಿಎಸ್‌ಎಸ್‌ಎನ್ ಅಧ್ಯಕ್ಷ ಎನ್. ರಾಮಮೂರ್ತಿ ಮಾತನಾಡಿ, ಗ್ರಾಮೀಣ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ರಸಗೊಬ್ಬರ ಮಾರಾಟ ಕೇಂದ್ರವನ್ನು ತೆರೆಯಲಾಗುತ್ತಿದೆ. ಜಿಕೆವಿಕೆಯಿಂದ ತರಬೇತಿ ಸಹ ನೀಡಲಾಗಿದೆ ಎಂದು ಹೇಳಿದರು.

ಬೊಮ್ಮವಾರ ವ್ಯವಸಾಯ ಸೇವಾ ಸಹಕಾರ ಸಂಘದ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ. ಭಾನುಮತಿ, ಸಹಕಾರ ಸಂಘದ ಉಪಾಧ್ಯಕ್ಷೆ ಅಂಬಿಕಾ, ನಿರ್ದೇಶಕರಾದ ಟಿ. ರವಿ, ಎಸ್.ಕೆ. ನಾಗೇಶ್, ಎನ್. ನಾರಾಯಣಸ್ವಾಮಿ, ಎನ್. ಮುನಿಯಪ್ಪ, ಎ. ರಾಮಾಂಜಿನಪ್ಪ, ರಮೇಶ್, ನವೀನ್ ಕುಮಾರ್, ಪುಷ್ಪಾ, ಎಚ್. ಮುನಿಕೃಷ್ಣ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸಿ. ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.